ನವದೆಹಲಿ:ಕಳೆದ ವರ್ಷ, ಅದಾನಿ ಸಮೂಹದ ಕಂಪನಿಗಳ ಕುರಿತು ಯುಎಸ್ ಶಾರ್ಟ್ ಸೆಲ್ಲರ್ ಹಿಂಡನ್ಬರ್ಗ್ ನೀಡಿದ ವರದಿಯು ದೇಶದ ವ್ಯಾಪಾರ ವಲಯದಲ್ಲಿ ತಲ್ಲಣ ಮೂಡಿಸಿತ್ತು. ಇದೀಗ, ಹಿಂಡನ್ಬರ್ಗ್ ರಿಸರ್ಚ್ ಮಾರುಕಟ್ಟೆ ನಿಯಂತ್ರಕ ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ಮತ್ತು ಅವರ ಪತಿಯ ಮೇಲೆ ಗಂಭೀರ ಆರೋಪ ಮಾಡಿದೆ.
ಹಿಂಡನ್ಬರ್ಗ್ ರಿಸರ್ಚ್ ಶನಿವಾರ ಬೆಳಗ್ಗೆ ತನ್ನ 'ಎಕ್ಸ್' ಖಾತೆಯಲ್ಲಿ 'ಸಮ್ಥಿಂಗ್ ಬಿಗ್ ಸೂನ್ ಇಂಡಿಯಾ' ಎಂದು ಪೋಸ್ಟ್ ಮಾಡಿತ್ತು. ಅದರ ಬೆನ್ನಲ್ಲೇ, ಹಿಂಡೆನ್‌ಬರ್ಗ್ ರಿಸರ್ಚ್ ತನ್ನ ವೆಬ್‌ಸೈಟ್‌ನಲ್ಲಿ ಈ ವರದಿಯನ್ನು ಪೋಸ್ಟ್ ಮಾಡಿದೆ.
ಹಿಂಡನ್ಬರ್ಗ್ ರಿಸರ್ಚ್ ವರದಿಯ ಪ್ರಕಾರ, ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ಮತ್ತು ಅವರ ಪತಿಯು ಅದಾನಿ ಗ್ರೂಪ್ ವಿರುದ್ಧ ಕೇಳಿಬಂದ ಹಣದ ಹಗರಣದಲ್ಲಿ ಬಳಸಲ್ಪಟ್ಟ ಅಸ್ಪಷ್ಟ ವಿದೇಶಿ ಷೇರುಗಳಲ್ಲಿ ಪಾಲು ಹೊಂದಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಅವರು ಬರ್ಮುಡಾ ಮತ್ತು ಮಾರಿಷಸ್ ಫಂಡ್‌ಗಳಲ್ಲಿ ವಿನೋದ್ ಅದಾನಿಯೊಂದಿಗೆ ವ್ಯವಹಾರಿಕ ಸಂಬಂಧ ಹೊಂದಿದ್ದಾರೆ. ವಿನೋದ್ ಅದಾನಿ ದುಬೈನಲ್ಲಿ ವಾಸಿಸುತ್ತಿದ್ದು, ಉದ್ಯಮಿ ಗೌತಮ್ ಅದಾನಿ ಅವರ ಹಿರಿಯ ಸಹೋದರರಾಗಿದ್ದಾರೆ. ಮಾಧಬಿ ಪುರಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಅವರು ವಿನೋದ್ ಅದಾನಿಯವರ ನೆರವಿನಿಂದ ಕಡಲಾಚೆಯ ಷೇರುಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮಾಧಬಿ ಬುಚ್ ದಂಪತಿಯು ಜೂನ್ 5, 2015ರಂದು ಸಿಂಗಾಪುರದ ಐಪಿಇ ಪ್ಲಸ್ ಫಂಡ್‌ನಲ್ಲಿ ತಮ್ಮ ಖಾತೆ ತೆರೆದಿದ್ದಾರೆ. ನಿಧಿಯ ಘೋಷಣೆಯ ಪ್ರಕಾರ, ಮಾಧಬಿ ಬುಚ್ ಮತ್ತು ಅವರ ಪತಿ ತಮ್ಮ ಸಂಬಳದ ಹಣದಿಂದ ಹೂಡಿಕೆ ಮಾಡಿದ್ದಾರೆ. ನಿಧಿಯ ಘೋಷಣೆ ಪತ್ರದಲ್ಲಿ ಐಐಎಫ್‌ಎಲ್‌ನ ಸಹಿಯೂ ಇದೆ ಎಂದು ಹಿಂಡೆನ್‌ಬರ್ಗ್ ಆರೋಪಿಸಿದೆ.