ನವದೆಹಲಿ:ಸಾರ್ವತ್ರಿಕ ಚುನಾವಣೆಗೆ ಮುನ್ನ ಕೇಂದ್ರ ಸರ್ಕಾರ ಹಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದೆ. ಉಜ್ವಲ ಯೋಜನೆಯಡಿ ಬಡ ಮಹಿಳೆಯರಿಗೆ ಪ್ರತಿ ಎಲ್‌ಪಿಜಿ ಸಿಲಿಂಡರ್ ಸಬ್ಸಿಡಿಯನ್ನು ಏಪ್ರಿಲ್ 1 ರಿಂದ ಮುಂದಿನ ಆರ್ಥಿಕ ವರ್ಷದವರೆಗೂ 300 ರೂ.ಗಳ ಸಹಾಯಧನವನ್ನು ವಿಸ್ತರಿಸುವುದಾಗಿ ಕೇಂದ್ರ ಸರ್ಕಾರ ಗುರುವಾರ ಘೋಷಿಸಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸರಕಾರವು ಸಬ್ಸಿಡಿಯನ್ನು 200 ರೂ.ನಿಂದ 300 ರೂಗೆ ಹೆಚ್ಚಳ ಮಾಡಿತ್ತು. ಪ್ರತಿ 14.2-ಕೆಜಿ ಸಿಲಿಂಡರ್‌ಗಳಂತೆ ವರ್ಷಕ್ಕೆ 12 ರೀಫಿಲ್‌ಗಳಿಗೆ ಪ್ರತಿ ಸಿಲಿಂಡರ್ ಭರ್ತಿಗೆ 300 ರೂ. ಸಹಾಯಧನವನ್ನು ಘೋಷಿಸಲಾಗಿತ್ತು. ಈ ಘೋಷಣೆ ಇದೇ ಮಾರ್ಚ್ 31ಕ್ಕೆ ಕೊನೆಗೊಳ್ಳಲಿತ್ತು. ಹೀಗಾಗಿ ಈ ಸಹಾಯಧನವನ್ನು ಮುಂದಿನ ಹಣಕಾಸು ವರ್ಷಕ್ಕೂ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಈ ಸಬ್ಸಿಡಿಯನ್ನು 2024-25ರವರೆಗೆ ವಿಸ್ತರಿಸಲು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ - ಸಿಸಿಇಎ ನಿರ್ಧರಿಸಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಮಾಹಿತಿ ನೀಡಿದ್ದಾರೆ. ಸರ್ಕಾರದ ಈ ನಿರ್ಧಾರದಿಂದಾಗಿ ಸುಮಾರು 10 ಕೋಟಿ ಕುಟುಂಬಗಳಿಗೆ ಅನುಕೂಲವಾಗಲಿದ್ದು, ಸರ್ಕಾರಕ್ಕೆ 12,000 ಕೋಟಿ ರೂ. ಹೊರೆ ಆಗಲಿದೆ. ಇದೇ ಏಪ್ರಿಲ್ ಮೇನಲ್ಲಿ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಈ ಘೋಷಣೆ ಮಾಡಿದೆ.