ಕರ್ನಾಟಕ

karnataka

ETV Bharat / business

2024ರ ವರ್ಷದಲ್ಲಿ ಕಾಮೆಕ್ಸ್​ನಲ್ಲಿ ಚಿನ್ನ, ಬೆಳ್ಳಿ ದರ ಶೇ 30, 35ರಷ್ಟು ಏರಿಕೆ - COMEX PRICES

ಕಾಮೆಕ್ಸ್​ನಲ್ಲಿ ಚಿನ್ನದ ದರಗಳು ಏರಿಕೆಯಾಗಿವೆ.

2024ರ ವರ್ಷದಲ್ಲಿ ಕಾಮೆಕ್ಸ್​ನಲ್ಲಿ ಚಿನ್ನ, ಬೆಳ್ಳಿ ದರ ಶೇ 30, 35ರಷ್ಟು ಏರಿಕೆ
ಸಾಂದರ್ಭಿಕ ಚಿತ್ರ (IANS)

By ETV Bharat Karnataka Team

Published : 6 hours ago

ಮುಂಬೈ: ಸರಕು ವಿನಿಮಯ ಎಕ್ಸ್​ಚೇಂಜ್​ (Commodity Exchange-COMEX)ನಲ್ಲಿ 2024ರಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಕ್ರಮವಾಗಿ ಸರಿಸುಮಾರು 30 ಪ್ರತಿಶತ ಮತ್ತು 35 ಪ್ರತಿಶತದಷ್ಟು ಗಮನಾರ್ಹ ಏರಿಕೆಯಾಗಿವೆ ಎಂದು ವರದಿಯೊಂದು ತಿಳಿಸಿದೆ.

ರಿಸರ್ವ್ ಬ್ಯಾಂಕ್ ನೀತಿಗಳು ಮತ್ತು ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳಿಂದಾಗಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಗಮನಾರ್ಹವಾಗಿ ಏರಿಕೆಯಾಗಿದ್ದು, ಇತರ ಅಂಶಗಳು ಸಹ ದರ ಏರಿಕೆಗೆ ಕಾರಣವಾಗಿವೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ (ಎಂಒಎಫ್ಎಸ್ಎಲ್) ವರದಿ ತಿಳಿಸಿದೆ.

2024ರಲ್ಲಿ ಅಮೂಲ್ಯ ಲೋಹಗಳ ಜಾಗತಿಕ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಉದಯೋನ್ಮುಖ ದೇಶಗಳ ಬ್ಯಾಂಕುಗಳು ಸೇರಿದಂತೆ ವಿಶ್ವದಾದ್ಯಂತದ ಕೇಂದ್ರ ಬ್ಯಾಂಕುಗಳು ಕಳೆದೊಂದು ದಶಕದಿಂದ ಚಿನ್ನದ ನಿವ್ವಳ ಖರೀದಿದಾರರಾಗಿವೆ. 2024ರಲ್ಲಿ ಇವು ಒಟ್ಟಾಗಿ 500 ಟನ್‌ಗಿಂತ ಹೆಚ್ಚು ಚಿನ್ನವನ್ನು ಖರೀದಿಸಿವೆ. ಇದು ಆರ್ಥಿಕ ಅನಿಶ್ಚಿತತೆಗಳ ನಡುವೆ ವಿಭಿನ್ನ ಆಸ್ತಿಗಳ ರೂಪದಲ್ಲಿ ಮೀಸಲುಗಳನ್ನು ಹೂಡಿಕೆ ಮಾಡುವ ತಂತ್ರವಾಗಿದೆ ಎಂದು ವರದಿ ತಿಳಿಸಿದೆ.

"ಭವಿಷ್ಯದ ಬಗ್ಗೆ ನೋಡುವುದಾದರೆ, ಚಿನ್ನ ಮತ್ತು ಬೆಳ್ಳಿಯ ಬಗೆಗಿನ ದೃಷ್ಟಿಕೋನವು ಸಕಾರಾತ್ಮಕವಾಗಿದೆ. ಆದಾಗ್ಯೂ ಕೆಲ ಮಾರುಕಟ್ಟೆ ಬಲವರ್ಧನೆ ಅಥವಾ ಅಲ್ಪಾವಧಿಯ ಕುಸಿತಗಳು ಕಂಡು ಬರಬಹುದು. ಸಡಿಲ ವಿತ್ತೀಯ ನೀತಿ ವಾತಾವರಣ, ಭೌಗೋಳಿಕ ರಾಜಕೀಯ ಅಪಾಯಗಳು ಚಿನ್ನ ಮತ್ತು ಬೆಳ್ಳಿಗೆ ಅನುಕೂಲಕರ ಹಿನ್ನೆಲೆಯಲ್ಲಿ ಒದಗಿಸುವುದನ್ನು ಮುಂದುವರಿಸಲಿವೆ" ಎಂದು ಎಂಒಎಫ್ಎಸ್ಎಲ್​ನ ಸರಕು ಸಂಶೋಧನೆಯ ವಿಶ್ಲೇಷಕ ಮಾನವ್ ಮೋದಿ ಹೇಳಿದ್ದಾರೆ.

ಕೇಂದ್ರೀಯ ಬ್ಯಾಂಕುಗಳಿಂದ ಹೆಚ್ಚುತ್ತಿರುವ ಈ ಆಸಕ್ತಿಯು ಬೆಲೆ ಏರಿಕೆಗೆ ಕಾರಣವಾಗುತ್ತಿದೆ. ಈ ಸಂಸ್ಥೆಗಳು ಫಿಯೆಟ್ ಕರೆನ್ಸಿಗಳ ಚಂಚಲತೆಯ ವಿರುದ್ಧ ರಕ್ಷಣೆಯಾಗಿ ಚಿನ್ನವನ್ನು ಸಂಗ್ರಹಿಸುವುದು ಇದಕ್ಕೆ ಕಾರಣವಾಗಿದೆ. ಹಿಂದಿನ ವರ್ಷಗಳಲ್ಲಿ ಹೊರಹರಿವು ಕಂಡಿದ್ದ ಚಿನ್ನದ ಇಟಿಎಫ್ ಗಳಲ್ಲಿನ ಇತ್ತೀಚಿನ ಪುನರುಜ್ಜೀವನವು ಸುರಕ್ಷಿತ ಆಸ್ತಿಯಾಗಿ ಚಿನ್ನದ ಬಗ್ಗೆ ಹೂಡಿಕೆದಾರರ ಆಸಕ್ತಿಯು ಮರಳಿರುವುದನ್ನು ಸೂಚಿಸುತ್ತದೆ.

ಭಾರತದಲ್ಲಿ ದೇಶೀಯವಾಗಿ ಈ ಎರಡೂ ಲೋಹಗಳ ಬೇಡಿಕೆ ಹೆಚ್ಚಾಗಿದೆ. ಚಿನ್ನ ಮತ್ತು ಬೆಳ್ಳಿ ಇಟಿಎಫ್​ಗಳಲ್ಲಿ ನಿರ್ವಹಣೆಯಲ್ಲಿರುವ ಸ್ವತ್ತುಗಳು ಕ್ರಮವಾಗಿ 30,000 ಕೋಟಿ ಮತ್ತು 7,500 ಕೋಟಿ ರೂ. ಮೀರಿದೆ. ಹೆಚ್ಚುವರಿಯಾಗಿ, ಭಾರತ ಸರ್ಕಾರವು ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕ ಕಡಿಮೆ ಮಾಡಿರುವುದ ಕೂಡ ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ. ವಿಶೇಷವಾಗಿ ಹಬ್ಬಗಳು ಮತ್ತು ವಿವಾಹ ಋತುಗಳಲ್ಲಿ ಬೆಲೆಗಳು ಮತ್ತೂ ಹೆಚ್ಚಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಜಾಗತಿಕ ಸರಾಸರಿ ಮೀರಿದ ಭಾರತದ ಹಣಕಾಸು ಉಳಿತಾಯ: ಎಸ್​ಬಿಐ - INDIAS SAVINGS RATE

ABOUT THE AUTHOR

...view details