ಕರ್ನಾಟಕ

karnataka

ETV Bharat / business

ಬೆಳ್ಳುಳ್ಳಿ ಬೆಲೆ ಕೆಜಿಗೆ 500- 550ಕ್ಕೆ ಏರಿಕೆ: ಬೀದಿ ಬದಿ ವ್ಯಾಪಾರಿಗಳಿಗೂ ತಟ್ಟಿದ ಬಿಸಿ - ಚೈನೀಸ್ ಫುಡ್​ಗೆ ಹೊಡೆತ

ಉತ್ತರ ಪ್ರದೇಶ ಸೇರಿ ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳುಳ್ಳಿ ಬೆಲೆ ಗಗನಕ್ಕೇರಿದ್ದು, ಕೆಜಿಗೆ 500 - 550 ರೂ.ವರೆಗೆ ಮಾರಾಟವಾಗುತ್ತಿದೆ. ಇದು ಗ್ರಾಹಕರನ್ನು ಕಂಗೆಡಿಸಿದೆ.

Garlic prices soar out of control in UP
ಬೆಳ್ಳುಳ್ಳಿ ಬೆಲೆ ಕೆಜಿಗೆ 500- 550ಕ್ಕೆ ಏರಿಕೆ: ಬೀದಿ ಬದಿ ವ್ಯಾಪಾರಿಗಳಿಗೂ ತಟ್ಟಿದ ಬಿಸಿ

By ETV Bharat Karnataka Team

Published : Feb 15, 2024, 10:05 AM IST

ಲಖನೌ, ಉತ್ತರಪ್ರದೇಶ: ಚೈನೀಸ್ ಮತ್ತು ಮುಘಲಾಯಿ ಭಕ್ಷ್ಯಗಳನ್ನು ಇಲ್ಲಿನ ಜನ ತಮ್ಮ ತಟ್ಟೆಗಳಿಂದ ಸ್ವಲ್ಪ ಸಮಯದವರೆಗೆ ದೂರ ಇಡಬೇಕಾಗಬಹುದು. ಕಾರಣ ಇಷ್ಟೇ ಇದಕ್ಕೆ ಅಗತ್ಯವಾಗಿ ಬೇಕಾಗಿರುವ ಬೆಳ್ಳುಳ್ಳಿ ದುಬಾರಿಯಾಗಿದೆ. ಹೀಗಾಗಿ ಈ ಭಕ್ಷ್ಯಗಳ ತಯಾರಿಗೆ ಅಡ್ಡಿಯಾಗಿದೆ.

ಉತ್ತರ ಪ್ರದೇಶದ ಪ್ರಮುಖ ನಗರಗಳಲ್ಲಿ ಬೆಳ್ಳುಳ್ಳಿ ಬೆಲೆ ಗಗನಕ್ಕೇರಿದ್ದು, ಕೆಜಿಗೆ 500 - 550 ರೂ.ವರೆಗೆ ಮಾರಾಟವಾಗುತ್ತಿದೆ. ಹೊಸ ಬೆಳೆ ಬಂದರೆ ಎರಡು ವಾರಗಳ ನಂತರ ಬೆಲೆ ಕುಸಿಯಬಹುದು ಎಂದು ವ್ಯಾಪಾರಿಗಳು ಭರವಸೆ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳೀಯ ಫಾರ್ಮ್‌ಗಳಿಂದ ಸಣ್ಣ ಪ್ರಮಾಣದಲ್ಲಿ ವಿವಿಧ ಮಾರುಕಟ್ಟೆಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಆದರೆ ಭಾರಿ ಬೇಡಿಕೆ ಹಿನ್ನೆಲೆಯಲ್ಲಿ ಇದು ಸಾಕಾಗುತ್ತಿಲ್ಲ. ಮುಖ್ಯವಾಗಿ ಮಧ್ಯಪ್ರದೇಶ ಮತ್ತು ರಾಜಸ್ಥಾನದಿಂದ ಬೆಳ್ಳುಳ್ಳಿ ಉತ್ತರ ಪ್ರದೇಶದ ಮಾರುಕಟ್ಟೆಗಳಿಗೆ ಬರುತ್ತದೆ.

ಕಳೆದ ವರ್ಷ ಮುಂಗಾರು ವಿಳಂಬವಾಗಿ ಬೆಳ್ಳುಳ್ಳಿ ಬಿತ್ತನೆಯನ್ನು ಆಗಸ್ಟ್‌ಗೆ ಮುಂದೂಡಿದ್ದರಿಂದ ಇಳುವರಿ ಕಡಿಮೆ ಆಗಿದೆ. ಹೀಗಾಗಿಯೇ ಬೆಲೆ ಏರಿಕೆ ಆಗಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ. ಆಗಸ್ಟ್​ನಲ್ಲಿ ಬಿತ್ತನೆ ಮಾಡಿದ್ದರಿಂದ ಕೊಯ್ಲು ತಡವಾಯ್ತು ಮತ್ತು ಪೂರೈಕೆಯಲ್ಲೂ ವಿಳಂಬವಾಗಿದ್ದರಿಂದ ಈ ಪರಿಸ್ಥಿತಿ ತಲೆದೋರಿದೆ ಎಂದು ಹೇಳಲಾಗುತ್ತಿದೆ.

ಬೆಳ್ಳುಳ್ಳಿ ದುಬಾರಿ ಆಗಿರುವುದು ಹೋಟೆಲ್​, ರೆಸ್ಟೋರೆಂಟ್​ ಗಳ ಮಾಲೀಕರನ್ನು ಕಂಗೆಡುವಂತೆ ಮಾಡಿದೆ. ಹೆಚ್ಚುತ್ತಿರುವ ಬೆಲೆ ಏರಿಕೆಯನ್ನು ನಾವೇ ಭರಿಸಬೇಕೆ? ಗ್ರಾಹಕರಿಗೆ ವರ್ಗಾಯಿಸಬೇಕೇ ಎಂಬ ಚಿಂತೆಯಲ್ಲಿ ಮಗ್ನರಾಗಿದ್ದಾರೆ. ನಾವು ಬೆಳ್ಳುಳ್ಳಿಯನ್ನು ದೊಡ್ಡ ಪ್ರಮಾಣದಲ್ಲಿ ಬಳಸುವುದರಿಂದ, ಬೆಲೆ ಏರಿಕೆಯ ಶಾಕ್​ ತಡೆದುಕೊಳ್ಳಲು ಆಗುತ್ತಿಲ್ಲ. ಬೆಲೆ ಏರಿಕೆ ಆಗಿದೆ ಎಂಬ ಕಾರಣಕ್ಕೆ ಬೆಳ್ಳುಳ್ಳಿ ಬಳಕೆಯನ್ನು ಕಡಿಮೆ ಮಾಡಲು ಕೂಡಾ ಸಾಧ್ಯವಿಲ್ಲ. ಏಕೆಂದರೆ ಅದು ರುಚಿಯ ಮೇಲೆ ಪರಿಣಾಮ ಬೀರುತ್ತದೆ. ಬೆಲೆ ಏರಿಕೆಯನ್ನು ಗ್ರಾಹಕರಿಗೆ ವರ್ಗಾಯಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ ಎನ್ನುತ್ತಾರೆ ಲಖನೌದ ಜನಪ್ರಿಯ ಚೀನೀ ರೆಸ್ಟೋರೆಂಟ್​ನ ಮಾಲೀಕರು

ಬೀದಿ ವ್ಯಾಪಾರಿಗಳಿಗೂ ಹೊಡೆತ:ನೂಡಲ್ಸ್ ಮಾರುವ ಬೀದಿ ವ್ಯಾಪಾರಿಗಳಿಗೂ ಭಾರಿ ಹೊಡೆತ ಬಿದ್ದಿದೆ. ಬೆಳ್ಳುಳ್ಳಿ ಇಲ್ಲದೆ ಮೊಮೊಸ್ ಅನ್ನು ಹೇಗೆ ತಯಾರಿಸಬೇಕೆಂದು ಯೋಚಿಸುತ್ತಿದ್ದೇವೆ. ಆದರೆ ಅದಿಲ್ಲದೇ ತಿನ್ನಲು ಆಗಲ್ಲ, ಬೆಲೆಗಳನ್ನು ಹೆಚ್ಚು ಮಾಡಲೇಬೇಕಾದ ಪ್ರಸಂಗ ಬಂದಿದೆ. ಆದರೆ, ನಮ್ಮ ಗ್ರಾಹಕರು ಇನ್ನೂ ಈ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ, ಇದು ನಮಗೆ ತುಸು ನೆಮ್ಮದಿ ತಂದಿದೆ ಅಂತಾರೆ ಟ್ರಾನ್ಸ್-ಗೋಮ್ಟಿ ಪ್ರದೇಶದಲ್ಲಿ ಮೊಮೊಸ್​ ಮಾರಾಟ ಮಾಡುವ ರಾಜ್‌ಕುಮಾರ್

ಮುಘಲಾಯಿ ರೆಸ್ಟೊರೆಂಟ್‌ಗಳಿಗೂ ತಟ್ಟಿದ ಬಿಸಿ: ಟೊಮೆಟೊ ಬೆಲೆ ಏರಿಕೆ ಆಯ್ತು ಅದಾದ ಕೆಲ ದಿನಗಳ ಬಳಿಕ ಈರುಳ್ಳಿ ದರ ಏರಿತು. ಈಗ ಬೆಳ್ಳುಳ್ಳಿ ಬೆಲೆಯಲ್ಲಿ ಅಸಹಜ ಏರಿಕೆ ಆಗಿದೆ. ನಾವು ಸತತವಾಗಿ ಇಂತಹ ಬೆಲೆ ಏರಿಕೆ ಹೊಡೆತವನ್ನು ತಡೆದುಕೊಂಡಿದ್ದೇವೆ. ಏಕೆಂದರೆ ಈ ಮೂರು ಪದಾರ್ಥಗಳು ಮುಘಲಾಯಿ ಭಕ್ಷ್ಯಗಳಿಗೆ ಅತ್ಯಗತ್ಯವಾಗಿರುತ್ತದೆ ಎಂದು ಜನಪ್ರಿಯ ತಿನಿಸುಗಳ ಮಾಲೀಕ ಜಾವೇದ್ ಖಾನ್ ಹೇಳಿದ್ದಾರೆ.

ಇದನ್ನು ಓದಿ:ಭಾರತದಿಂದ ಬಾಳೆಹಣ್ಣು ತರಿಸಿಕೊಳ್ಳಲಾರಂಭಿಸಿದ ರಷ್ಯಾ: ಕಾರಣ ಏನು ಗೊತ್ತಾ?

ABOUT THE AUTHOR

...view details