ನವದೆಹಲಿ : ಎಲೆಕ್ಟ್ರಿಕ್ ವಾಹನ (ಇವಿ) ಕಂಪನಿ ಅಲ್ಟ್ರಾವಯೋಲೆಟ್ ಬುಧವಾರ ಹೊಸ ಇ-ಮೋಟಾರ್ ಸೈಕಲ್ ಎಫ್ 77 ಮ್ಯಾಕ್ 2 ಅನ್ನು ಬಿಡುಗಡೆ ಮಾಡಿದೆ. ಎಫ್ 77 ಮ್ಯಾಕ್ 2 ಮೋಟರ್ ಸೈಕಲ್ 2,99,000 ರೂಪಾಯಿಗಳ ಆರಂಭಿಕ ಬೆಲೆಯಲ್ಲಿ ಲಭ್ಯವಾಗಲಿದೆ. ಇದಕ್ಕೂ ಹೆಚ್ಚಿನ ಸಾಮರ್ಥ್ಯದ ಎಫ್ 77 ಮ್ಯಾಕ್ 2 ರೆಕಾನ್ಗೆ 3,99,000 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.
ಎಫ್77 ಮ್ಯಾಕ್ 2 ಮತ್ತು ಎಫ್77 ಮ್ಯಾಕ್ 2 ರೆಕಾನ್ ಇ-ಮೋಟರ್ ಸೈಕಲ್ಗಳು ಸ್ಟೆಲ್ಲರ್ ವೈಟ್, ಸೂಪರ್ ಸಾನಿಕ್ ಸಿಲ್ವರ್, ಲೈಟ್ನಿಂಗ್ ಬ್ಲೂ, ಪ್ಲಾಸ್ಮಾ ರೆಡ್, ಟರ್ಬೊ ರೆಡ್, ಆಫ್ಟರ್ ಬರ್ನರ್ ಯೆಲ್ಲೋ, ಸ್ಟೆಲ್ತ್ ಗ್ರೇ, ಆಸ್ಟೆರಾಯ್ಡ್ ಗ್ರೇ ಮತ್ತು ಕಾಸ್ಮಿಕ್ ಗ್ರೇ ಎಂಬ ಒಂಬತ್ತು ಬಣ್ಣಗಳಲ್ಲಿ ಲಭ್ಯವಾಗಲಿವೆ. ಎಫ್ 77 ಮ್ಯಾಕ್ 2 ದೇಶಾದ್ಯಂತ 15 ನಗರಗಳಲ್ಲಿ ಹಂತ ಹಂತವಾಗಿ ಲಭ್ಯವಾಗಲಿದೆ. ಮೇ 2024 ರಿಂದ ಮೋಟರ್ ಸೈಕಲ್ ಖರೀದಿಗೆ ಸಿಗಲಿದೆ.
ಅತ್ಯಾಧುನಿಕ ವೈಲೆಟ್ ಎಐ ಸಿಸ್ಟಮ್ ಅನ್ನು ಒಳಗೊಂಡಿರುವ ಎಫ್ 77 ಮ್ಯಾಕ್ 2 ಅನ್ನು ನೈಜ ಪ್ರಪಂಚದ ಅನುಭವದಿಂದ ಸಂಗ್ರಹಿಸಲಾದ ವ್ಯಾಪಕ ಮಾಹಿತಿಯನ್ನು ಆಧರಿಸಿ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿಯ ಸಿಟಿಒ ಮತ್ತು ಸಹ-ಸಂಸ್ಥಾಪಕ ನೀರಜ್ ರಾಜ್ ಮೋಹನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.