What say EPS rules?:ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ EPFO ನವೆಂಬರ್ 1995 ರಲ್ಲಿ 'ನೌಕರರ ಪಿಂಚಣಿ ಯೋಜನೆ 95' (EPS 95) ಯೋಜನೆಯನ್ನು ಪ್ರಾರಂಭಿಸಿತು. ಇದನ್ನು ಮುಖ್ಯವಾಗಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಾಗಿ ಜಾರಿಗೆ ತರಲಾಗಿತ್ತು. ಇಪಿಎಸ್ ಯೋಜನೆಗೆ ಸೇರಿದವರು 58 ವರ್ಷಗಳನ್ನು ಪೂರೈಸಿದ ನಂತರ ಪಿಂಚಣಿ ಪಡೆಯುತ್ತಾರೆ. ಒಮ್ಮೆ 10 ವರ್ಷಗಳ ಕಾಲ ನೀವು ಇಪಿಎಫ್ ಖಾತೆ ಹಣ ಹಾಕಿದ್ದರೆ. 58 ವರ್ಷ ಪೂರ್ಣವಾದ ಬಳಿಕ ನಿಮಗೆ ಪಿಂಚಣಿ ಹಣ ಬರುತ್ತಿತ್ತು. ಆದರೆ, ಈಗ ನೀವು ಬಯಸಿದರೆ 50 ನಲ್ಲಿ ಪಿಂಚಣಿ ಪಡೆಯಲು ಅವಕಾಶವಿದೆ. ಅದು ಹೇಗೆ? ಅನ್ನೋದನ್ನು ನಾವು ಈ ಸುದ್ದಿಯಲ್ಲಿ ತಿಳಿಸಿಕೊಡುತ್ತೇವೆ
ಒಬ್ಬ ವ್ಯಕ್ತಿಯು ಕೆಲಸಕ್ಕೆ ಸೇರಿದ ನಂತರ ಇಪಿಎಫ್ ಖಾತೆಯನ್ನು ತೆರೆಯಬಹುದು. ಉದ್ಯೋಗಿಯ ಮೂಲ ವೇತನದ 12 ಪ್ರತಿಶತ + ತುಟ್ಟಿಭತ್ಯೆಯನ್ನು ಇಪಿಎಫ್ ಖಾತೆಯಲ್ಲಿ ಮಾಲೀಕತ್ವದ ಪಾಲು ಆಗಿ ಠೇವಣಿ ಮಾಡಲಾಗುತ್ತದೆ. ಉದ್ಯೋಗಿ ಕೂಡ ಈ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಇಲ್ಲಿ ಉದ್ಯೋಗಿ ಪಾವತಿಸಿದ ಮೊತ್ತವನ್ನು ಭವಿಷ್ಯ ನಿಧಿಗೆ ಜಮಾ ಮಾಡಲಾಗುತ್ತದೆ. ಆದರೆ, ಇಪಿಎಫ್‌ಒ ನಿಯಮಗಳ ಪ್ರಕಾರ, ಉದ್ಯೋಗದಾತ ಪಾವತಿಸಿದ ಶೇಕಡ 12 ರಷ್ಟು ಕೊಡುಗೆಯಲ್ಲಿ 3.67 ಪ್ರತಿಶತವನ್ನು ಭವಿಷ್ಯ ನಿಧಿಗೆ ಜಮಾ ಮಾಡಲಾಗುತ್ತದೆ. ಉಳಿದ 8.33 ಶೇಕಡಾ ನೌಕರರ ಪಿಂಚಣಿ ಯೋಜನೆಗೆ ಹೋಗುತ್ತದೆ. ನೀವು ನಿವೃತ್ತರಾದ ನಂತರ ನೀವು ಈ ಇಪಿಎಸ್ ಕಾರ್ಪಸ್‌ನಿಂದ ಪಿಂಚಣಿ ಪಡೆಯುತ್ತೀರಿ.
ಷರತ್ತುಗಳು ಅನ್ವಯ:ಇಪಿಎಸ್ ಅಡಿ ಪಿಂಚಣಿ ಪಡೆಯಲು, ನೀವು ಕನಿಷ್ಠ 10 ವರ್ಷಗಳ ಕಾಲ ಕೆಲಸ ಮಾಡಿರಬೇಕು. ಆಗ ಮಾತ್ರ ನೀವು ಕನಿಷ್ಠ ಪಿಂಚಣಿ ಪಡೆಯಲು ಅರ್ಹರಾಗುತ್ತೀರಿ. ಈಗಿರುವ ನಿಯಮಗಳ ಪ್ರಕಾರ ಒಬ್ಬ ಉದ್ಯೋಗಿಗೆ ಕನಿಷ್ಠ 1000 ರೂ.ನಿಂದ ಗರಿಷ್ಠ 7500 ರೂ.ವರೆಗೆ ಪಿಂಚಣಿ ಪಡೆಯಬಹುದು.
ಪಿಂಚಣಿ ಲೆಕ್ಕಾಚಾರ ಹೇಗೆ?: ಕನಿಷ್ಠ 10 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಉದ್ಯೋಗಿ ಇಪಿಎಫ್ ಆರಂಭಿಕ ಪಿಂಚಣಿಗೆ ಅರ್ಹರಾಗಿರುತ್ತಾರೆ. ಆದರೆ, ಉದ್ಯೋಗಿಯ ವಯಸ್ಸು 50-58 ವರ್ಷಗಳ ನಡುವೆ ಇರಬೇಕು. 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಪಿಂಚಣಿ ಪಡೆಯಲು ಸಾಧ್ಯವಿಲ್ಲ.
ಇಲ್ಲಿ ನೆನಪಿಡುವ ಅಂಶವೇನು? ನೀವು 58 ವರ್ಷಕ್ಕಿಂತ ಮೊದಲು ಪಿಂಚಣಿ ತೆಗೆದುಕೊಳ್ಳಲು ಯೋಜಿಸಿದರೆ, ನಿಮ್ಮ ಪಿಂಚಣಿ ಪ್ರತಿ ವರ್ಷ 4 ಪ್ರತಿಶತದಷ್ಟು ಕಡಿಮೆಯಾಗುತ್ತದೆ. ಉದಾಹರಣೆಗೆ, ನೀವು 57 ನೇ ವಯಸ್ಸಿನಲ್ಲಿ ಪಿಂಚಣಿ ತೆಗೆದುಕೊಂಡರೆ, ಪಿಂಚಣಿ ಶೇಕಡಾ 4 ರಷ್ಟು ಕಡಿಮೆಯಾಗುತ್ತದೆ. ಅಂದರೆ, ನೀವು 56 ನೇ ವಯಸ್ಸಿನಲ್ಲಿ ಪಿಂಚಣಿ ತೆಗೆದುಕೊಂಡರೆ, ಪಿಂಚಣಿ ಶೇ 4 + 4 ರಷ್ಟು ಕಡಿಮೆಯಾಗುತ್ತದೆ.