ಭಾರತೀಯ ರೈಲ್ವೆ ನಿತ್ಯ ಕೋಟಿಗಟ್ಟಲೆ ಜನರನ್ನು ಅವರವರ ಊರುಗಳಿಗೆ ತಲುಪಿಸುವ ಸುವ್ಯವಸ್ಥಿತ ಸೇವೆ ಸಲ್ಲಿಸುತ್ತಿದೆ. ಪ್ರಯಾಣಿಕರು ಆರಾಮವಾಗಿ ಪ್ರಯಾಣಿಸಲು ಇದು ಅನೇಕ ಸೌಲಭ್ಯಗಳನ್ನು ಒದಗಿಸುತ್ತದೆ. ಹೌದು ಇಂತಹ ಸೇವೆ ಸಲ್ಲಿಸುವ ರೈಲ್ವೆ ಕೋಚ್‌ಗಳಿಗೆ ವಿವಿಧ ಬಣ್ಣಗಳು ಇರುವುದನ್ನು ನೀವು ಎಂದಾದರೂ ಗಮನಿಸಿದ್ದೀರಾ? ಭಾರತೀಯ ರೈಲು ಕೋಚ್‌ಗಳು ವಿವಿಧ ಬಣ್ಣಗಳಲ್ಲಿ ಇರಲು ಹೀಗಿವೆ ಕಾರಣಗಳು. ಆ ಬಗ್ಗೆ ಈಗ ತಿಳಿದುಕೊಳ್ಳೋಣ.
ವಾಸ್ತವವಾಗಿ ರೈಲು ಕೋಚ್‌ಗಳನ್ನು ವಿವಿಧ ಬಣ್ಣಗಳಲ್ಲಿ ಚಿತ್ರಿಸಲು ಕಾರಣ ಕೇವಲ ಸೌಂದರ್ಯಕ್ಕಾಗಿ ಅಲ್ಲ. ಈ ಬಣ್ಣದ ಸಂಕೇತಗಳು ವಿಶೇಷ ಅರ್ಥವನ್ನು ಹೊಂದಿವೆ. ಈ ಬಣ್ಣಗಳು ಅದರಲ್ಲಿ ನೀಡಲಾದ ಸೌಕರ್ಯದ ಮಟ್ಟವನ್ನು ಸೂಚಿಸುತ್ತವೆ. ಅಂದರೆ, ಬಣ್ಣಗಳ ಆಧಾರದ ಮೇಲೆ ಹವಾನಿಯಂತ್ರಣ ಸೇರಿದಂತೆ ಅತ್ಯಂತ ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಕೋಚ್‌ಗಳ ಬಗ್ಗೆ ಈ ಬಣ್ಣಗಳು ನಮಗೆ ದಾರಿ ತೋರುತ್ತವೆ.
ನೀಲಿ ಬಣ್ಣದ ಕೋಚ್‌ಗಳು ಏನನ್ನು ಸೂಚಿಸುತ್ತವೆ?: ಈ ನೀಲಿ ಬಣ್ಣದ ಕೋಚ್‌ಗಳು ಮುಖ್ಯವಾಗಿ ರಾಜಧಾನಿ ಮತ್ತು ಶತಾಬ್ದಿ ಎಕ್ಸ್‌ಪ್ರೆಸ್‌ನಂತಹ ರೈಲುಗಳಲ್ಲಿ ಕಂಡುಬರುತ್ತವೆ. ಅವುಗಳನ್ನು ವೇಗವಾಗಿ ಮತ್ತು ಆರಾಮದಾಯಕ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಈ ನೀಲಿ ಬಣ್ಣದ ಕೋಚ್‌ಗಳನ್ನು ಹೊಂದಿರುವ ರೈಲುಗಳು ಗಂಟೆಗೆ 70 - 140 ಕಿ.ಮೀ ವೇಗದಲ್ಲಿ ಚಲಿಸುತ್ತವೆ. ಈ ಕೋಚ್‌ಗಳು ಉಕ್ಕಿನಿಂದ ಮಾಡಲ್ಪಟ್ಟಿವೆ. ಇವು ಏರ್ ಬ್ರೇಕ್‌ಗಳನ್ನು ಹೊಂದಿವೆ. ಈ ನೀಲಿ ಕೋಚ್‌ಗಳ ಆಸನಗಳು ವಿಶಾಲವಾದ ಮತ್ತು ಆರಾಮದಾಯಕವಾಗಿವೆ. ಅಡುಗೆ ಸೇವೆಯೂ ಲಭ್ಯವಿದೆ. ಆರಾಮದಾಯಕ ಪ್ರಯಾಣವನ್ನು ಬಯಸುವವರಿಗೆ ಈ ನೀಲಿ ಕೋಚ್‌ಗಳು ಸೂಕ್ತವಾಗಿವೆ. ಆದರೆ, ಈ ಟ್ರೈನ್ಗಳ ಟಿಕೆಟ್ ದರ ಸ್ವಲ್ಪ ಹೆಚ್ಚು.
ಕೆಂಪು ಬಣ್ಣದ ಕೋಚ್‌ಗಳ ಅರ್ಥವೇನು?: ರೆಡ್ ಕೋಚ್‌ಗಳನ್ನು ಲಿಂಕ್ ಹಾಫ್‌ಮನ್ ಬುಷ್ ಕೋಚ್‌ಗಳು ಎಂದೂ ಕರೆಯಲಾಗುತ್ತದೆ. 2000ನೇ ದಶಕದ ಆರಂಭದಲ್ಲಿ ಈ ಕೋಚ್‌ಗಳನ್ನು ಭಾರತೀಯ ರೈಲುಗಳಲ್ಲಿ ಪರಿಚಯಿಸಲು ಪ್ರಾರಂಭಿಸಲಾಯಿತು. ಈ ಕೆಂಪು ಕೋಚ್‌ಗಳನ್ನು ಪಂಜಾಬ್‌ನ ಕಪುರ್ತಲಾದಲ್ಲಿ ನಿರ್ಮಿಸಲಾಗಿದೆ. ಅಲ್ಯೂಮಿನಿಯಂನಿಂದ ತಯಾರಿಸಲ್ಪಟ್ಟ ಈ ಕೋಚ್‌ಗಳು ತುಂಬಾ ಹಗುರವಾಗಿರುತ್ತವೆ. ಈ ಕೋಚ್‌ಗಳನ್ನು ಹೊಂದಿರುವ ಟ್ರೈನ್ಗಳು ಗಂಟೆಗೆ 200 ಕಿಮೀ ವೇಗದಲ್ಲಿ ಚಲಿಸುತ್ತವೆ. ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ಕೋಚ್‌ಗಳು ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿವೆ. ಈ ಕೆಂಪು ಬಣ್ಣದ ಕೋಚ್‌ಗಳಲ್ಲಿ ಪ್ರೀಮಿಯಂ ಸೇವೆಗಳನ್ನು ಒದಗಿಸಲಾಗಿದೆ. ಸಾಮಾನ್ಯವಾಗಿ ರಾಜಧಾನಿ ಮತ್ತು ಶತಾಬ್ದಿ ರೈಲುಗಳಲ್ಲಿ ಈ ಬೋಗಿಗಳಿರುತ್ತವೆ. ಐಷಾರಾಮಿ, ಸೌಕರ್ಯ ಮತ್ತು ವೇಗದಲ್ಲಿ ಪ್ರಯಾಣಿಸಲು ಬಯಸುವವರಿಗೆ ಈ ಕೆಂಪು ಕೋಚ್‌ಗಳು ಸೂಕ್ತವಾಗಿವೆ.
ಹಸಿರು ಬಣ್ಣದ ಕೋಚ್‌ಗಳು: ಹಸಿರು, ಕೆಂಪು ಮತ್ತು ನೀಲಿ ಕೋಚ್‌ಗಳಂತೆ ಇಲ್ಲಿಯೂ ಏರ್ ಕಂಡಿಷನ್ ಸೌಲಭ್ಯ ಉಂಟು. ಆದರೆ, ಇತರ ಕೋಚ್‌ಗಳಿಗೆ ಹೋಲಿಸಿದರೆ ಈ ಹಸಿರು ಕೋಚ್‌ಗಳಲ್ಲಿ ಪ್ರಯಾಣಿಸುವ ವೆಚ್ಚ ಸಾಕಷ್ಟು ಕಡಿಮೆ. ಈ ಹಸಿರು ಕೋಚ್‌ಗಳು ವಿವಿಧ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಕಂಡುಬರುತ್ತವೆ. ಕಡಿಮೆ ಬಜೆಟ್‌ನಲ್ಲಿ ರೈಲಿನಲ್ಲಿ ಆರಾಮವಾಗಿ ಪ್ರಯಾಣಿಸಲು ಬಯಸುವವರಿಗೆ ಈ ಹಸಿರು ಬಣ್ಣದ ಕೋಚ್‌ಗಳು ಸೂಕ್ತವಾಗಿವೆ.
ಈ ಬಣ್ಣಗಳ ಮಹತ್ವವೇನು?: ಭಾರತೀಯ ರೈಲುಗಳು ಅನೇಕ ಬಣ್ಣದ ಕೋಚ್‌ಗಳನ್ನು ಹೊಂದಿವೆ. ಹಳದಿ ಕೋಚ್‌ಗಳು ಹವಾನಿಯಂತ್ರಣವನ್ನು ಹೊಂದಿರುವುದಿಲ್ಲ. ಹಾಗಾಗಿ ಅವುಗಳ ಟಿಕೆಟ್ ದರ ಕಡಿಮೆ. ಬ್ರೌನ್ ಕೋಚ್‌ಗಳು ಸ್ಲೀಪರ್ ಬರ್ತ್‌ಗಳನ್ನು ಹೊಂದಿದ್ದು ರಾತ್ರಿಯ ಪ್ರಯಾಣಕ್ಕೆ ಸೂಕ್ತವಾಗಿದೆ. ಉದಾ (ನೇರಳೆ) ಬಣ್ಣದ ಕೋಚ್‌ಗಳು ಹೆಚ್ಚಾಗಿ ತೇಜಸ್ ಎಕ್ಸ್‌ಪ್ರೆಸ್‌ನಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳಿವೆ.