ನವದೆಹಲಿ: 2023-24ರ ಹಿಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆಯಲ್ಲಿ ರೈತರಿಂದ 6.41 ಲಕ್ಷ ಮೆಟ್ರಿಕ್ ಟನ್ ಬೇಳೆಕಾಳುಗಳನ್ನು ಖರೀದಿಸಿದೆ. ಇದಕ್ಕಾಗಿ ಒಟ್ಟು 4,820 ಕೋಟಿ ರೂ. ಪಾವತಿಸಲಾಗಿದ್ದು, 2.75 ಲಕ್ಷ ರೈತರಿಗೆ ಪ್ರಯೋಜನವಾಗಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಈ ಖರೀದಿಯಲ್ಲಿ 2.49 ಲಕ್ಷ ಮೆಟ್ರಿಕ್ ಟನ್ (ಎಲ್ಎಂಟಿ) ಮಸೂರ್ (ಚನ್ನಂಗಿ ಬೇಳೆ), 43,000 ಮೆಟ್ರಿಕ್ ಟನ್ ಕಡಲೆ ಮತ್ತು 3.48 ಎಲ್ಎಂಟಿ ಹೆಸರು ಕಾಳು ಸೇರಿವೆ.
ಹಾಗೆಯೇ, 5.29 ಲಕ್ಷ ರೈತರಿಂದ 6,900 ಕೋಟಿ ರೂ.ಗಳಷ್ಟು ಎಂಎಸ್ಪಿ ಮೌಲ್ಯದ 12.19 ಎಲ್ಎಂಟಿ ಎಣ್ಣೆಕಾಳುಗಳನ್ನು ಖರೀದಿಸಲಾಗಿದೆ. ಪ್ರಸಕ್ತ ಖಾರಿಫ್ ಋತುವಿನ ಆರಂಭದಲ್ಲಿ ಸೋಯಾಬೀನ್ನ ಮಾರುಕಟ್ಟೆ ಬೆಲೆಗಳು ಎಂಎಸ್ಪಿ ಬೆಲೆಗಳಿಗಿಂತ ಕಡಿಮೆ ಆಗಿದ್ದರಿಂದ ರೈತರು ಸಂಕಷ್ಟಕ್ಕೀಡಾಗಿದ್ದರು.
ಪಿಎಸ್ಎಸ್ ಯೋಜನೆಯಡಿ (ಪಿಎಂ ಆಶಾದ ಒಂದು ಘಟಕ) ಕೇಂದ್ರದ ಮಧ್ಯಪ್ರವೇಶದೊಂದಿಗೆ, ಈ ವರ್ಷದ ಡಿಸೆಂಬರ್ 11 ರವರೆಗೆ 2,700 ಕೋಟಿ ರೂ.ಗಳ ಎಂಎಸ್ಪಿ ಮೌಲ್ಯದ 5.62 ಲಕ್ಷ ಎಲ್ಎಂಟಿ ಸೋಯಾಬೀನ್ ಅನ್ನು ಖರೀದಿಸಲಾಗಿದೆ. ಇದರಿಂದ 2.42 ಲಕ್ಷ ರೈತರಿಗೆ ಅನುಕೂಲವಾಗಿದೆ. ಇದು ಈವರೆಗೆ ಖರೀದಿಸಲಾದ ಅತ್ಯಧಿಕ ಪ್ರಮಾಣದ ಸೋಯಾಬೀನ್ ಆಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
2018-19 ರಿಂದ ಖರೀದಿಸಲಾದ ಬೆಳೆ ಕಾಳುಗಳ ಅಂಕಿ ಅಂಶಗಳ ಪ್ರಕಾರ, ಅಂದಿನಿಂದ ಈವರೆಗೆ ಸುಮಾರು 195.39 ಎಲ್ಎಂಟಿ ಬೇಳೆಕಾಳುಗಳು, ಎಣ್ಣೆಕಾಳುಗಳು ಮತ್ತು ಕೊಬ್ಬರಿಯನ್ನು 10.74 ಲಕ್ಷ ಕೋಟಿ ರೂ.ಗಳ ಎಂಎಸ್ಪಿ ಬೆಲೆಯಲ್ಲಿ ಖರೀದಿಸಲಾಗಿದೆ. ಇದು ಕೇಂದ್ರದ ಪ್ರಧಾನ ಮಂತ್ರಿ ಅನ್ನದಾತ ಆಯ್ ಸಂರಕ್ಷಣ್ ಅಭಿಯಾನ್ (ಪಿಎಂ-ಆಶಾ) ಯೋಜನೆಯಡಿ 99.3 ಲಕ್ಷ ರೈತರಿಗೆ ಪ್ರಯೋಜನ ನೀಡಿದೆ.
ಎಂಐಎಸ್ ಅಡಿಯಲ್ಲಿ ಭೌತಿಕ ಸಂಗ್ರಹಣೆಯ ಬದಲಿಗೆ, ರಾಜ್ಯಗಳು ಮಾರುಕಟ್ಟೆ ಮಧ್ಯಸ್ಥಿಕೆ ಬೆಲೆ ಮತ್ತು ಮಾರಾಟದ ಬೆಲೆಯ ನಡುವೆ ವ್ಯತ್ಯಾಸದ ಪಾವತಿ ಮಾಡುವ ಆಯ್ಕೆಯನ್ನು ಅಳವಡಿಸಿಕೊಳ್ಳಬಹುದು. ಇದು ಬೆಳೆಗಳ ಉತ್ಪಾದನೆಯ ಶೇಕಡಾ 25 ರಷ್ಟು ವ್ಯಾಪ್ತಿ ಮತ್ತು ಎಂಐಪಿಯ ಶೇಕಡಾ 25 ರವರೆಗೆ ಗರಿಷ್ಠ ಬೆಲೆ ವ್ಯತ್ಯಾಸಕ್ಕೆ ಒಳಪಟ್ಟಿರುತ್ತದೆ.
ಇದಲ್ಲದೆ, ಉತ್ಪಾದನೆ ಮತ್ತು ಬಳಕೆಯ ರಾಜ್ಯಗಳ ನಡುವೆ ಬೆಲೆ ವ್ಯತ್ಯಾಸವಿರುವ ಟಾಪ್ ಬೆಳೆಗಳ ವಿಷಯದಲ್ಲಿ, ರೈತರ ಹಿತದೃಷ್ಟಿಯಿಂದ, ಬೆಳೆಗಳನ್ನು ಉತ್ಪಾದಿಸುವ ರಾಜ್ಯಗಳಿಂದ ಇತರ ಬಳಕೆಯ ರಾಜ್ಯಗಳಿಗೆ ಬೆಳೆಗಳನ್ನು ಸಂಗ್ರಹಿಸಲು ಮತ್ತು ಸಾಗಿಸಲು ನಾಫೆಡ್ ಮತ್ತು ಎನ್ಸಿಸಿಎಫ್ನಂತಹ ಕೇಂದ್ರ ನೋಡಲ್ ಏಜೆನ್ಸಿಗಳು (ಸಿಎನ್ಎಗಳು) ಮಾಡಿದ ಕಾರ್ಯಾಚರಣೆಯ ವೆಚ್ಚವನ್ನು ಸರ್ಕಾರವು ಮರುಪಾವತಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಮೂಲಸೌಕರ್ಯ ನಿರ್ಮಾಣಕ್ಕೆ ಕಡಿಮೆ ವೆಚ್ಚದ ತಂತ್ರಜ್ಞಾನ ಅಭಿವೃದ್ಧಿ ಅಗತ್ಯ: ಸಚಿವ ಗಡ್ಕರಿ - INFRASTRUCTURE DEVELOPMENT