ನವದೆಹಲಿ: ಗೋಧಿಯ ಬೆಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ನಿರಂತರ ಪ್ರಯತ್ನಗಳ ಭಾಗವಾಗಿ, ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳು ತಾವು ದಾಸ್ತಾನು ಮಾಡಿಟ್ಟುಕೊಳ್ಳಬಹುದಾದ ಗೋದಿ ದಾಸ್ತಾನು ಮಿತಿಯನ್ನು ಕಡಿಮೆ ಮಾಡಲು ಕೇಂದ್ರ ಸರಕಾರ ನಿರ್ಧರಿಸಿದೆ. ಇದು 2025ರ ಮಾರ್ಚ್ 31ರವರೆಗೆ ಅನ್ವಯವಾಗಲಿದೆ.
ಪ್ರಸ್ತುತ ಗೋಧಿ ದಾಸ್ತಾನು ಮಿತಿಯನ್ನು ಸಗಟು ವ್ಯಾಪಾರಿಗಳಿಗೆ 2,000 ಮೆಟ್ರಿಕ್ ಟನ್ ನಿಂದ 1,000 ಮೆಟ್ರಿಕ್ ಟನ್‌ಗೆ ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ 100 ಮೆಟ್ರಿಕ್ ಟನ್‌ನಿಂದ 50 ಮೆಟ್ರಿಕ್ ಟನ್‌ಗೆ ಇಳಿಸಲಾಗಿದೆ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ದೊಡ್ಡ ಪ್ರಮಾಣದಲ್ಲಿ ಗೋಧಿ ದಾಸ್ತಾನು ತಡೆಗಟ್ಟಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.
ಎಲ್ಲಾ ಗೋಧಿ ದಾಸ್ತಾನು ಘಟಕಗಳು ಗೋಧಿ ದಾಸ್ತಾನು ಮಿತಿ ಪೋರ್ಟಲ್ (https://evegoils.nic.in/wsp/login)ನಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ಪ್ರತಿ ಶುಕ್ರವಾರ ಸ್ಟಾಕ್ ಸ್ಥಿತಿಯನ್ನು ಅಪ್ಡೇಟ್ ಮಾಡಬೇಕೆಂದು ಸರ್ಕಾರ ನಿರ್ದೇಶನ ನೀಡಿದೆ.
ಪೋರ್ಟಲ್ನಲ್ಲಿ ನೋಂದಾಯಿಸದ ಅಥವಾ ಸ್ಟಾಕ್ ಮಿತಿಗಳನ್ನು ಉಲ್ಲಂಘಿಸುವ ಕಂಪನಿ ಅಥವಾ ಉದ್ಯಮಗಳ ವಿರುದ್ಧ ಅಗತ್ಯ ಸರಕುಗಳ ಕಾಯ್ದೆ, 1955ರ ಸೆಕ್ಷನ್ 6 ಮತ್ತು 7ರ ಅಡಿಯಲ್ಲಿ ಸೂಕ್ತ ದಂಡನಾತ್ಮಕ ಕ್ರಮ ಕೈಗೊಳ್ಳಬಹುದು ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಕಂಪನಿಗಳು ಹೊಂದಿರುವ ದಾಸ್ತಾನು ನಿಗದಿತ ಮಿತಿಗಿಂತ ಹೆಚ್ಚಿದ್ದರೆ, ಅಧಿಸೂಚನೆ ಹೊರಡಿಸಿದ 15 ದಿನಗಳ ಒಳಗೆ ಅದನ್ನು ನಿಗದಿತ ಸ್ಟಾಕ್ ಮಿತಿಗೆ ತರಬೇಕಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.