ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಅಧಿವೇಶನ ಜುಲೈ 22 ರಿಂದ ಆ.12ರವರೆಗೆ ನಡೆಯಲಿದೆ. ಜುಲೈ 23 ರಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪೂರ್ಣ ಪ್ರಮಾಣದ ಆಯವ್ಯಯ ಮಂಡಿಸಲಿದ್ದಾರೆ.
''ಸಂಸತ್ತಿನ ಬಜೆಟ್ ಅಧಿವೇಶನ ಜುಲೈ 22 ರಿಂದ ಆಗಸ್ಟ್ 12ರವರೆಗೆ ನಡೆಯಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 23 ರಂದು ಬಜೆಟ್ ಮಂಡಿಸಲಿದ್ದಾರೆ'' ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಶನಿವಾರ ತಿಳಿಸಿದ್ದಾರೆ.
"ಭಾರತ ಸರ್ಕಾರದ ಶಿಫಾರಸಿನ ಮೇರೆಗೆ ಗೌರವಾನ್ವಿತ ರಾಷ್ಟ್ರಪತಿಗಳು, 2024 ರ ಜುಲೈ 22 ರಿಂದ ಆಗಸ್ಟ್ 12ರವರೆಗೆ ಬಜೆಟ್ ಅಧಿವೇಶನಕ್ಕಾಗಿ ಸಂಸತ್ತಿನ ಉಭಯ ಸದನಗಳನ್ನು ಕರೆಯುವ ಪ್ರಸ್ತಾವನೆಯನ್ನು ಅನುಮೋದಿಸಿದ್ದಾರೆ" ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ತನ್ನ ಮೂರನೇ ಅವಧಿಯಲ್ಲಿ ಮಂಡಿಸಲಿರುವ ಮೊದಲ ಬಜೆಟ್ ಇದಾಗಿದೆ. ಇದು ಅನೇಕ ಐತಿಹಾಸಿಕ ಹೆಜ್ಜೆಗಳಿಂದ ಗುರುತಿಸಲ್ಪಡುತ್ತದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದರು.
ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ದ್ರೌಪದಿ ಮುರ್ಮು ಅವರು ಮಾಡಿದ್ದ ಭಾಷಣದಲ್ಲಿ, ''ಪ್ರಮುಖ ಸಾಮಾಜಿಕ ಮತ್ತು ಆರ್ಥಿಕ ನಿರ್ಧಾರಗಳು ಬಜೆಟ್‌ನ ಪ್ರಮುಖ ಅಂಶಗಳಾಗಿವೆ'' ಎಂದು ತಿಳಿಸಿದ್ದರು. ಇದರಿಂದ ಈ ಬಾರಿಯ ಬಜೆಟ್ ಮೇಲೆ ನಿರೀಕ್ಷೆಯು ಹೆಚ್ಚಿದೆ.
ಏಪ್ರಿಲ್-ಜೂನ್‌ನಲ್ಲಿ ನಡೆದ ಲೋಕಸಭೆ ಚುನಾವಣೆ ಹಿನ್ನೆಲೆ ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್ ಅನ್ನು ಮಂಡಿಸಲಾಗಿತ್ತು. ಲೋಕಸಭೆ ಚುನಾವಣೆಯಲ್ಲಿ ಎನ್ಎಡಿಎ ಮೈತ್ರಿ ಬಹುಮತ ಗಳಿಸಿದ್ದರಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪೂರ್ಣ ಪ್ರಮಾಣದ ಆಯವ್ಯಯ ಮಂಡಿಸಲಿದೆ.
ನಿರ್ಮಲಾ ಸೀತಾರಾಮನ್ ದಾಖಲೆಯ ಬಜೆಟ್:ಹಣಕಾಸು ಸಚಿವರಾಗಿದ್ದ ಮೊರಾರ್ಜಿ ದೇಸಾಯಿ ಅವರು ಐದು ಬಾರಿ ವಾರ್ಷಿಕ ಮತ್ತು ಒಂದು ಬಾರಿ ಮಧ್ಯಂತರ ಸೇರಿದಂತೆ ಒಟ್ಟು ಆರು ಬಾರಿ ಕೇಂದ್ರದ ಬಜೆಟ್ ಮಂಡಿಸಿ ದಾಖಲೆ ಬರೆದಿದ್ದರು. ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ ಮಧ್ಯಂತರ ಬಜೆಟ್ ಮಂಡಿಸಿ ಈ ದಾಖಲೆಯನ್ನು ಸರಿಗಟ್ಟಿದ್ದರು. ಈಗ 7ನೇ ಬಾರಿ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದ್ದರೆ. ಜುಲೈ 23 ರಂದು 2024–25ನೇ ಸಾಲಿನ ಬಜೆಟ್ ಮಂಡಿಸಿದರೆ ಸತತ ಏಳನೇ ಬಾರಿಗೆ ಆಯವ್ಯಯ ಮಂಡಿಸಿದ ದೇಶದ ಮೊದಲ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರಾರಗಲಿದ್ದಾರೆ.
ಇದನ್ನೂ ಓದಿ:ಲಡಾಖ್ ಗವರ್ನರ್ ಭೇಟಿಯಾದ ಕರ್ನಾಟಕ ಸಾರ್ವಜನಿಕ ಲೆಕ್ಕಪತ್ರ ಸಮಿತಿ - Study tour