ಹೈದರಾಬಾದ್: ಸ್ವದೇಶಿ ಕಾರು ತಯಾರಕ ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಕಂಪನಿಯಾಗಿದೆ. ಟಾಟಾ ಮೋಟಾರ್ಸ್ ತನ್ನ ಪೋರ್ಟ್ ಪೋಲಿಯೋದಲ್ಲಿ ಅನೇಕ ಎಲೆಕ್ಟ್ರಿಕ್ ಕಾರುಗಳನ್ನು ಹೊಂದಿದೆ ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರು ಅವುಗಳಿಗೆ ಫಿದಾ ಕೂಡಾ ಆಗುತ್ತಿದ್ದಾರೆ. ಇವುಗಳಲ್ಲಿ ಕಂಪನಿಯ EV ಹ್ಯಾಚ್‌ಬ್ಯಾಕ್ ಟಾಟಾ ಟಿಯಾಗೊ EV ಸಖತ್ ಸದ್ದು ಮಾಡುತ್ತಿದೆ.
ಟಾಟಾ ಟಿಯಾಗೊ ಆರಂಭಿಕ EV ಕೊಡುಗೆಗಳಲ್ಲಿ ಒಂದಾಗಿದೆ. ಅದು ಈಗ ಹೊಸ ಮೈಲಿಗಲ್ಲೊಂದನ್ನು ಸಾಧಿಸಿದೆ. ಟಾಟಾ ಮೋಟಾರ್ಸ್‌ನಿಂದ ಪಡೆದ ಮಾಹಿತಿಯ ಪ್ರಕಾರ, ಈ ಎಲೆಕ್ಟ್ರಿಕ್ ಕಾರು ಪ್ರಾರಂಭವಾದಾಗಿನಿಂದ 50,000 ಯುನಿಟ್‌ಗಳ ಮಾರಾಟವಾಗಿದೆ.
ಸೆಪ್ಟೆಂಬರ್ 2022 ರಲ್ಲಿ ಈ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಟಾಟಾ ಮೋಟಾರ್ಸ್‌ನಿಂದ ಒಟ್ಟು ಐದು ಎಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಅದರಲ್ಲಿ ಈ ಹ್ಯಾಚ್‌ಬ್ಯಾಕ್ ಕೂಡಾ ಒಂದಾಗಿದೆ. ಟಾಟಾ ಟಿಯಾಗೊ EV ಯ ಹೊರತಾಗಿ, ಕಂಪನಿಯ ಪೋರ್ಟ್‌ಫೋಲಿಯೊದಲ್ಲಿ ಟಾಟಾ ನೆಕ್ಸಾನ್ ಇವಿ, ಟಾಟಾ ಪಂಚ್ ಇವಿ, ಟಾಟಾ ಟಿಗೊರ್ ಇವಿ, ಟಾಟಾ ಎಕ್ಸ್-ಪ್ರೆಸ್ ಟಿ ಇವಿ ಮತ್ತು ಹೊಸ ಟಾಟಾ ಕರ್ವ್ವಿ ಇವಿ ಕೂಡಾ ಈಗ ಸೇರ್ಪಡೆಯಾಗಿದೆ.
ಯಾವ ಯಾವ ಬಣ್ಣದಲ್ಲಿ ಕಾರುಗಳು ಲಭ್ಯ?: ಟಾಟಾ ಮೋಟಾರ್ಸ್ ಮುಂದಿನ ವರ್ಷ ಈ ಪಟ್ಟಿಯಲ್ಲಿ ಟಾಟಾ ಹ್ಯಾರಿಯರ್ ಇವಿ, ಸಫಾರಿ ಇವಿ, ಅವಿನ್ಯಾ ಮತ್ತು ಟಾಟಾ ಸಿಯೆರಾ ಇವಿಗಳನ್ನು ಸೇರ್ಪಡೆ ಮಾಡುವ ಸಾಧ್ಯತೆಗಳಿವೆ ಎಂಬ ಮಾಹಿತಿ ಸಹ ಇದೀಗ ಹೊರ ಬಿದ್ದಿದೆ. ಟಾಟಾ ಟಿಯಾಗೊ EV ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದೆ, ಅವುಗಳೆಂದರೆ XE, XT, XZ+ ಮತ್ತು XZ+ ಲಕ್ಸ್. ಈ ಕಾರನ್ನು ಟೀಲ್ ಬ್ಲೂ, ಡೇಟೋನಾ ಗ್ರೇ, ಟ್ರಾಪಿಕಲ್ ಮಿಸ್ಟ್, ಪ್ರಿಸ್ಟಿನ್ ವೈಟ್ ಮತ್ತು ಮಿಡ್‌ನೈಟ್ ಪ್ಲಮ್ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತಿದೆ.