ನವದೆಹಲಿ: ಭಾರತ ಮತ್ತು ಆಫ್ರಿಕಾದ ವ್ಯವಹಾರದಲ್ಲಿನ ಬೆಂಬಲದಿಂದ 2025ರ ಎರಡನೇ ತ್ರೈಮಾಸಿಕದಲ್ಲಿ ಭಾರ್ತಿ ಏರ್ಟೆಲ್ನ ನಿವ್ವಳ ಲಾಭ ಶೇ 168ರಷ್ಟು ಏರಿಕೆಯಾಗಿ 3,593 ಕೋಟಿ ರೂ.ಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕಂಪನಿ 1,341 ಕೋಟಿ ರೂ. ನಿವ್ವಳ ಆದಾಯ ಗಳಿಸಿತ್ತು. ಕಂಪನಿಯ ತ್ರೈಮಾಸಿಕ ಆದಾಯ 41,473 ಕೋಟಿ ರೂ. ಆಗಿದ್ದು, ಇದು ವರ್ಷದಿಂದ ವರ್ಷಕ್ಕೆ ಶೇಕಡಾ 12ರಷ್ಟು ಹೆಚ್ಚಾಗಿದೆ.
ಮೊಬೈಲ್ ವಿಭಾಗದಲ್ಲಿ ಹೆಚ್ಚಿನ ಗಳಿಕೆ ಮತ್ತು ಹೋಮ್ಸ್ ಮತ್ತು ಏರ್ಟೆಲ್ ಬಿಸಿನೆಸ್ ವ್ಯವಹಾರದಲ್ಲಿ ನಿರಂತರ ಆವೇಗದ ಬೆಂಬಲದೊಂದಿಗೆ ಭಾರತದಲ್ಲಿನ ವ್ಯವಹಾರದ ತ್ರೈಮಾಸಿಕ ಆದಾಯ 31,561 ಕೋಟಿ ರೂ.ಗೆ ತಲುಪಿದ್ದು, ಶೇಕಡಾ 16.9ರಷ್ಟು ಏರಿಕೆಯಾಗಿದೆ.
ಕಂಪನಿಯ ಇಂಡಿಯಾ ಮೊಬೈಲ್ ವಿಭಾಗದ ಪ್ರತಿ ಬಳಕೆದಾರರ ಸರಾಸರಿ ಆದಾಯ (ಎಆರ್‌ಪಿಯು) 233 ರೂ.ಗೆ ಏರಿಕೆಯಾಗಿದೆ. ಇದು ಒಂದು ವರ್ಷದ ಹಿಂದೆ ಇದ್ದ 203 ರೂ.ಗಳಿಗಿಂತ ಹೆಚ್ಚಾಗಿದೆ.
"ನಾವು ಮತ್ತೊಂದು ತ್ರೈಮಾಸಿಕದಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ತೋರಿಸಿದ್ದೇವೆ. ಭಾರತದ ಆದಾಯವು ಅನುಕ್ರಮವಾಗಿ ಶೇಕಡಾ 8.7ರಷ್ಟು ಬೆಳೆಯುತ್ತಿದೆ. 7.7ರಷ್ಟು ಸ್ಥಿರ ಕರೆನ್ಸಿ ಬೆಳವಣಿಗೆಯೊಂದಿಗೆ ಆಫ್ರಿಕಾ ವಿಭಾಗದ ಆದಾಯದ ಬೆಳವಣಿಗೆಯ ವೇಗ ಸ್ಥಿರವಾಗಿದೆ" ಎಂದು ಕಂಪನಿಯ ಎಂಡಿ ಮತ್ತು ಸಿಇಒ ಗೋಪಾಲ್ ವಿಠಲ್ ಹೇಳಿದ್ದಾರೆ.
ರಚನಾತ್ಮಕ ಉತ್ತರಾಧಿಕಾರ ಪ್ರಕ್ರಿಯೆಯ ಭಾಗವಾಗಿ, ಕಳೆದ 12 ವರ್ಷಗಳಿಂದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಕಂಪನಿಯನ್ನು ಮುನ್ನಡೆಸಿದ ವಿಠ್ಠಲ್ ಅವರನ್ನು ಕಾರ್ಯನಿರ್ವಾಹಕ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಪ್ರಸ್ತುತ ಮುಖ್ಯ ಕಾರ್ಯಾಚರಣೆ ಅಧಿಕಾರಿ (ಸಿಒಒ) ಶಾಶ್ವತ್ ಶರ್ಮಾ ಅವರನ್ನು ಜನವರಿ 1ರಂದು ಭಾರ್ತಿ ಏರ್ಟೆಲ್ನ ಎಂಡಿ ಮತ್ತು ಸಿಇಒ ಆಗಿ ನೇಮಕ ಮಾಡಲಾಗುವುದು.
"ಗುಣಮಟ್ಟದ ಗ್ರಾಹಕರನ್ನು ಗೆಲ್ಲುವುದು ಮತ್ತು ಪ್ರೀಮಿಯಂ ಅನ್ನು ಹೆಚ್ಚಿಸುವತ್ತ ಗಮನಹರಿಸಿದ್ದರಿಂದಾಗಿ ನಾವು 4.2 ಮಿಲಿಯನ್ ಸ್ಮಾರ್ಟ್ಫೋನ್ ಗ್ರಾಹಕರನ್ನು ಹೊಸದಾಗಿ ಸೇರ್ಪಡೆ ಮಾಡಿಕೊಂಡಿದ್ದೇವೆ. ಎಫ್ ಡಬ್ಲ್ಯೂಎ ಕೊಡುಗೆಗಳೊಂದಿಗೆ ನಾವು ನಮ್ಮ ವೈ-ಫೈ ವ್ಯಾಪ್ತಿಯನ್ನು 2,000 ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸುತ್ತಿದ್ದೇವೆ" ಎಂದು ವಿಠ್ಠಲ್ ಹೇಳಿದರು.
ಭಾರತದಲ್ಲಿ ಮೊಬೈಲ್ ಸೇವೆಗಳ ಆದಾಯವು ಶೇಕಡಾ 18.5ರಷ್ಟು ಏರಿಕೆಯಾಗಿದ್ದರೆ, ಟ್ಯಾರಿಫ್ ಹೆಚ್ಚಳ, ಮತ್ತಷ್ಟು ಸ್ಮಾರ್ಟ್ ಫೋನ್ ಡೇಟಾ ಗ್ರಾಹಕರ ಸೇರ್ಪಡೆಗಳಿಂದಾಗಿ ಏರ್ಟೆಲ್ ಬಿಸಿನೆಸ್ ಆದಾಯವು ಶೇಕಡಾ 10.7ರಷ್ಟು ಹೆಚ್ಚಾಗಿದೆ. ಡಿಜಿಟಲ್ ಟಿವಿ 15.8 ಮಿಲಿಯನ್ ಗ್ರಾಹಕರನ್ನು ಹೊಂದಿದ್ದು 759 ಕೋಟಿ ರೂ.ಗಳ ಆದಾಯವನ್ನು ದಾಖಲಿಸಿದೆ. ಭಾರ್ತಿ ಏರ್ಟೆಲ್ ಷೇರು ಸೋಮವಾರ ಶೇಕಡಾ 0.16ರಷ್ಟು ಕುಸಿದು 1,663.35 ರೂ.ಗೆ ತಲುಪಿದೆ.
ಇದನ್ನೂ ಓದಿ: 5 ದಿನದಿಂದ ಬಿದ್ದು ಪುಟಿದೆದ್ದ ಷೇರು ಮಾರುಕಟ್ಟೆ: ಇಂದು ಲಾಭಗಳಿಸಿದ ಷೇರುಗಳಿವು