ಬೆಂಗಳೂರು: ದೃಢವಾದ ಮತ್ತು ಅಭಿವೃದ್ಧಿ ಹೊಂದಿದ (ವಿಕಸಿತ್ ಭಾರತ್) ನಿರ್ಮಾಣದಲ್ಲಿ ಬೆಂಗಳೂರು ತೆರಿಗೆದಾರರ ಕೊಡುಗೆಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಶ್ಲಾಘಿಸಿದ್ದಾರೆ. ಇಡೀ ತೆರಿಗೆ ಇಲಾಖೆ ತನ್ನ ಸಂಪೂರ್ಣ ರಾಷ್ಟ್ರೀಯ ಮುಖರಹಿತ ಆದಾಯ ತೆರಿಗೆ ಮೌಲ್ಯಮಾಪನ ಯೋಜನೆ (national faceless income tax assessment scheme) ಯನ್ನು ಕರ್ನಾಟಕದ ರಾಜಧಾನಿಯಿಂದಲೇ ನಿರ್ವಹಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಆದಾಯ ತೆರಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗಾಗಿ ನಿರ್ಮಿಸಲಾಗುತ್ತಿರುವ "ಹೊಂಗಿರಣ" ವಸತಿ ಸಂಕೀರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾತನಾಡಿದ ಅವರು, ಬೆಂಗಳೂರಿನ ತೆರಿಗೆ ಪಾವತಿದಾರರು ನಮಗೆ ಸಂಪೂರ್ಣವಾಗಿ ಉತ್ತೇಜನ ನೀಡುತ್ತಿದ್ದಾರೆ ಎಂದರು ಮತ್ತು ದೃಢವಾದ ಹಾಗೂ 'ವಿಕಸಿತ್ ಭಾರತ್' ನಿರ್ಮಾಣಕ್ಕೆ ಕೈಜೋಡಿಸಿರುವುದಕ್ಕೆ ಪ್ರದೇಶದ ಎಲ್ಲಾ ವೈಯಕ್ತಿಕ ಮತ್ತು ಕಾರ್ಪೊರೇಟ್ ತೆರಿಗೆದಾರರಿಗೆ ಧನ್ಯವಾದ ಅರ್ಪಿಸಿದರು.
"ನಿಮ್ಮ ಕೊಡುಗೆ ಅಪಾರ. ಇದರಲ್ಲಿ ಎಂದಿಗೂ ಇಳಿಕೆಯಾಗಿಲ್ಲ. ಆದ್ದರಿಂದ ಆ ವೇಗವನ್ನು ಹೆಚ್ಚಿಸಿದ್ದಕ್ಕಾಗಿ ಬೆಂಗಳೂರಿಗೆ ತುಂಬಾ ಧನ್ಯವಾದಗಳು" ಎಂದು ಅವರು ಹೇಳಿದರು. ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರ ಮಾಡುತ್ತಿರುವ ಹೂಡಿಕೆಗಳ ಬಗ್ಗೆ ಸೀತಾರಾಮನ್ ಒತ್ತಿ ಹೇಳಿದರು.
ತೆರಿಗೆದಾರರಿಗೆ ಆಗುತ್ತಿದ್ದ ಕಿರುಕುಳ ತಡೆಗಟ್ಟಲು ಹಾಗೂ ಆದಾಯ ತೆರಿಗೆ ಮೌಲ್ಯಮಾಪನ ಮತ್ತು ವ್ಯವಹಾರವನ್ನು ಸುಲಭಗೊಳಿಸಲು ಸರ್ಕಾರವು ಸಂಪೂರ್ಣ ಮುಖರಹಿತ ವ್ಯವಸ್ಥೆಯನ್ನು ತಂದಿದೆ. ಹೀಗಾಗಿ ತೆರಿಗೆದಾರರು ಅಧಿಕಾರಿಯ ಎದುರಿಗೆ ಹೋಗಿ ಕುಳಿತು ಮಾತನಾಡಬೇಕಾದ ಪ್ರಸಂಗ ಇನ್ನು ಮುಂದೆ ಉದ್ಭವಿಸುವುದಿಲ್ಲ ಎಂದು ಅವರು ಹೇಳಿದರು.