ನವದೆಹಲಿ:ಅದಾನಿ ಗ್ರೂಪ್ ತನ್ನ ಸಾಲಗಳ ಕಂತು ಪಾವತಿ ಮತ್ತು ಮಧ್ಯಮಾವಧಿಯಲ್ಲಿ ಯೋಜಿತ ಬಂಡವಾಳ ವೆಚ್ಚಗಳನ್ನು ಪೂರೈಸಲು ಸಾಕಾಗುವಷ್ಟು ನಗದು ಲಭ್ಯತೆ ಮತ್ತು ಕಾರ್ಯಾಚರಣೆಯ ನಗದು ಹರಿವನ್ನು ಹೊಂದಿದೆ ಎಂದು ಅದಾನಿ ಗ್ರೂಪ್ನ ಆರ್ಥಿಕ ಪರಿಸ್ಥಿತಿಯ ಬಗ್ಗೆ ಕ್ರಿಸಿಲ್ ರೇಟಿಂಗ್ಸ್ ಅಪ್ಡೇಟ್ ನೀಡಿದೆ.
ಕ್ರಿಸಿಲ್ ರೇಟಿಂಗ್ಸ್ ಹೇಳಿರುವ ಅಂಶಗಳಿವು:"ನಮ್ಮ ಎಲ್ಲಾ ಬಾಕಿ ಇರುವ ರೇಟಿಂಗ್ಗಳು ನಿರಂತರ ಪರಿಶೀಲನೆಯಲ್ಲಿವೆ" ಎಂದು ಕ್ರಿಸಿಲ್ ರೇಟಿಂಗ್ಸ್ ಹೇಳಿದೆ. ಅದಾನಿ ಸಮೂಹ ಕಂಪನಿಗಳ ವಿರುದ್ಧ ಅಮೆರಿಕದಲ್ಲಿ ಮೊಕದ್ದಮೆಗಳು ದಾಖಲಾಗಿರುವ ಸಂದರ್ಭದಲ್ಲಿ ಕ್ರಿಸಿಲ್ ರೇಟಿಂಗ್ ಕಂಪನಿಯ ಬಗ್ಗೆ ಹೊಸ ಅಪ್ಡೇಟ್ ನೀಡಿರುವುದು ಗಮನಾರ್ಹ.
ನವೆಂಬರ್ 20, 2024 ರಂದು ಯುಎಸ್ ನ್ಯಾಯಾಂಗ ಇಲಾಖೆ ಮತ್ತು ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಕಮಿಷನ್ (ಎಸ್ಇಸಿ) ಗೌತಮ್ ಅದಾನಿ, ಸಾಗರ್ ಅದಾನಿ ಮತ್ತು ವ್ನೀತ್ ಜೈನ್ ಸೇರಿದಂತೆ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (ಎಜಿಇಎಲ್) ನ ಪ್ರಮುಖ ಅಧಿಕಾರಿಗಳ ವಿರುದ್ಧ ಆರೋಪಗಳನ್ನು ಹೊರಿಸಿದೆ. ಸೆಕ್ಯುರಿಟೀಸ್ ವಂಚನೆ, ವೈರ್ ವಂಚನೆ ಮತ್ತು ದಾರಿತಪ್ಪಿಸುವ ಬಾಂಡ್ ಯೋಜನೆಗಳನ್ನು ಜಾರಿಗೊಳಿಸುವ ಆರೋಪಗಳನ್ನು ಇವರ ಮೇಲೆ ಹೊರಿಸಲಾಗಿದೆ.
ಲಂಚದ ಆರೋಪ ನಿರಾಕರಿಸಿದ ಅದಾನಿ ಕಂಪನಿ:"ಗೌತಮ್ ಅದಾನಿ, ಸಾಗರ್ ಅದಾನಿ ಮತ್ತು ವಿನೀತ್ ಜೈನ್ ವಿರುದ್ಧ ಯುಎಸ್ ಡಿಒಜೆ ಅಥವಾ ಯುಎಸ್ ಎಸ್ಇಸಿಯ ಸಿವಿಲ್ ದೂರಿನಲ್ಲಿ ತಿಳಿಸಲಾದ ಆರೋಪಗಳಲ್ಲಿ ಎಫ್ಸಿಪಿಎ ಉಲ್ಲಂಘನೆಯಾಗಿರುವ ಬಗ್ಗೆ ಯಾವುದೇ ಆರೋಪ ಹೊರಿಸಲಾಗಿಲ್ಲ" ಎಂದು ಹೇಳಿರುವ ಅದಾನಿ ಗ್ರೂಪ್ ಲಂಚದ ಆರೋಪಗಳನ್ನು ನಿರಾಕರಿಸಿದೆ.