ನವದೆಹಲಿ: ಭಾರತೀಯ ಷೇರು ಮಾರುಕಟ್ಟೆಯ ದಾಖಲೆಯ ಏರಿಕೆಯ ಮಧ್ಯೆ ಜೂನ್ ತಿಂಗಳಲ್ಲಿ 42.4 ಲಕ್ಷಕ್ಕೂ ಅಧಿಕ ಹೊಸ ಡಿಮ್ಯಾಟ್ ಖಾತೆಗಳನ್ನು ತೆರೆಯಲಾಗಿದ್ದು, ಇದು ಫೆಬ್ರವರಿಯ ನಂತರದ ಗರಿಷ್ಠ ಖಾತೆ ತೆರೆದ ದರವಾಗಿದೆ. ಹಾಗೆಯೇ ಮೇ ತಿಂಗಳಲ್ಲಿ 36 ಲಕ್ಷ ಹೊಸ ಡಿಮ್ಯಾಟ್ ಖಾತೆಗಳನ್ನು ತೆರೆಯಲಾಗಿತ್ತು ಎಂದು ಸೆಂಟ್ರಲ್ ಡಿಪಾಸಿಟರಿ ಸರ್ವಿಸ್ ಮತ್ತು ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಅಂಕಿಅಂಶಗಳು ತಿಳಿಸಿವೆ. ಪ್ರಸ್ತುತ ದೇಶದ ಒಟ್ಟು ಡಿಮ್ಯಾಟ್ ಖಾತೆಗಳ ಸಂಖ್ಯೆ ಈಗ 16.2 ಕೋಟಿಗಿಂತ ಹೆಚ್ಚಾಗಿದೆ.
ಒಂದೇ ತಿಂಗಳಲ್ಲಿ 40 ಲಕ್ಷ ಹೊಸ ಡಿಮ್ಯಾಟ್ ಖಾತೆಗಳನ್ನು ತೆರೆದಿರುವುದು ಇದು ನಾಲ್ಕನೇ ಬಾರಿ. ಈ ಹಿಂದೆ ಡಿಸೆಂಬರ್ 2023, ಜನವರಿ 2024 ಮತ್ತು ಈ ವರ್ಷದ ಫೆಬ್ರವರಿಯಲ್ಲಿ ಈ ಸಾಧನೆ ಮಾಡಲಾಗಿತ್ತು.
ಗುರುವಾರ, ಸೆನ್ಸೆಕ್ಸ್ ಮತ್ತು ನಿಫ್ಟಿ ಕ್ರಮವಾಗಿ 80,392 ಮತ್ತು 24,401 ರ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿವೆ. ಮಾರುಕಟ್ಟೆ ತಜ್ಞರ ಪ್ರಕಾರ, ದೇಶೀಯ ಮಾರುಕಟ್ಟೆಗೆ ಎಫ್ಐಐಗಳ ಮರಳುವಿಕೆ ಮತ್ತು ಸೆಪ್ಟೆಂಬರ್ನಲ್ಲಿ ಬಡ್ಡಿ ದರ ಕಡಿತದ ನಿರೀಕ್ಷೆಯು ಮಾರುಕಟ್ಟೆಯಲ್ಲಿ ಸಕಾರಾತ್ಮಕ ಭಾವನೆಯನ್ನು ಮೂಡಿಸಿದೆ.
ಭಾರತದಲ್ಲಿ ಸ್ಟಾಕ್ಗಳು, ಬಾಂಡ್ಗಳು ಮತ್ತು ಮ್ಯೂಚುವಲ್ ಫಂಡ್ಗಳಂತಹ ಸೆಕ್ಯುರಿಟಿಗಳನ್ನು ಖರೀದಿಸಬೇಕಾದರೆ ಡಿಮ್ಯಾಟ್ ಖಾತೆ ತೆರೆಯುವುದು ಕಡ್ಡಾಯವಾಗಿದೆ. ಡಿಮ್ಯಾಟ್ ಎಂಬುದು ಡಿಮೆಟೀರಿಯಲೈಸ್ಡ್ ಎಂಬುದರ ಸಂಕ್ಷಿಪ್ತ ರೂಪವಾಗಿದೆ. ಡಿಮ್ಯಾಟ್ ಖಾತೆಗಳು ಟ್ರೇಡ್ ಮಾಡಬಹುದಾದ ಷೇರುಗಳ ಮಾಲೀಕತ್ವವನ್ನು ಪತ್ತೆಹಚ್ಚುವ ಎಲೆಕ್ಟ್ರಾನಿಕ್ ದಾಖಲೆಗಳಾಗಿವೆ.