ನವದೆಹಲಿ: ಭಾರತದಲ್ಲಿ ಚಿನ್ನ ಸಂಸ್ಕರಣಾ ಉದ್ಯಮವು 2030 ರ ವೇಳೆಗೆ 25,000 ಹೊಸ ಉದ್ಯೋಗಗಳನ್ನು ಸೃಷ್ಟಿಸಲಿದೆ ಮತ್ತು ಸುಮಾರು 15,000 ಕೋಟಿ ರೂ.ಗಳ ಹೂಡಿಕೆಗೆ ಸಾಕ್ಷಿಯಾಗಲಿದೆ ಎಂದು ಹೊಸ ವರದಿಯೊಂದು ಗುರುವಾರ ತಿಳಿಸಿದೆ. ದೇಶೀಯ ಚಿನ್ನದ ಉತ್ಪಾದನೆಯು 2030 ರ ವೇಳೆಗೆ 100 ಟನ್ಗಳಿಗೆ ಏರಿಕೆಯಾಗಲಿದ್ದು, ಆ ಮೂಲಕ ವಿದೇಶಿ ವಿನಿಮಯ ಮೀಸಲುಗಳು ಕೂಡ ಗಮನಾರ್ಹವಾಗಿ ಹೆಚ್ಚಾಗಲಿದೆ, ವ್ಯಾಪಾರ ಸಮತೋಲನ ಸುಧಾರಿಸಲಿದೆ ಮತ್ತು ಜಿಡಿಪಿ ಕೂಡ ಹೆಚ್ಚಾಗಲಿದೆ ಎಂದು ಕೈಗಾರಿಕಾ ಸಂಸ್ಥೆ ಪಿಎಚ್ಡಿಸಿಸಿಐ (ಪಿಎಚ್ಡಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ) ಹೇಳಿದೆ.
"ಭಾರತೀಯ ಚಿನ್ನದ ಸಂಸ್ಕರಣೆ ಮತ್ತು ಉತ್ಪಾದನಾ ಉದ್ಯಮವು ಗಣನೀಯ ಬೆಳವಣಿಗೆ ಮತ್ತು ಪರಿವರ್ತನೆಗೆ ಸಜ್ಜಾಗಿದ್ದು, ಇದು 2047 ರ ವೇಳೆಗೆ ವಿಕಸಿತ ಭಾರತಕ್ಕೆ ಹೆಚ್ಚಿನ ಬೆಳವಣಿಗೆಯ ಹಾದಿಯಲ್ಲಿ ಭಾರತೀಯ ಆರ್ಥಿಕತೆಯನ್ನು ಬೆಂಬಲಿಸುತ್ತದೆ" ಎಂದು ಪಿಎಚ್ಡಿಸಿಸಿಐ ಅಧ್ಯಕ್ಷ ಸಂಜೀವ್ ಅಗರ್ವಾಲ್ ಹೇಳಿದರು.
ಭಾರತದ ಚಿನ್ನದ ಸಂಸ್ಕರಣೆ ಮತ್ತು ಉತ್ಪಾದನಾ ಉದ್ಯಮದಲ್ಲಿ ಗಮನಾರ್ಹ ಪ್ರಮಾಣದ ಹೂಡಿಕೆ ಹರಿದು ಬರುವ ನಿರೀಕ್ಷೆಯಿದೆ. ಈ ವಲಯದಲ್ಲಿ 2023 ರಲ್ಲಿ 1,000 ಕೋಟಿ ರೂ. ಇದ್ದ ಹೂಡಿಕೆಯು 2030 ರ ವೇಳೆಗೆ 15,000 ಕೋಟಿ ರೂ.ಗೆ ಏರಲಿದೆ ಎಂದು ಅವರು ಹೇಳಿದರು. ಈ ಹೂಡಿಕೆಯಿಂದಾಗಿ ಸೃಷ್ಟಿಯಾಗಲಿರುವ ಉದ್ಯೋಗಗಳು ಆರ್ಥಿಕತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ.