ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ (2024-25) ಮೊದಲ ನಾಲ್ಕು ತಿಂಗಳಲ್ಲಿ ಜುಲೈ 31ರ ವರೆಗೆ ಭಾರತದಿಂದ ಒಟ್ಟು 2.60 ಲಕ್ಷ ಟನ್ ಈರುಳ್ಳಿಯನ್ನು ರಫ್ತು ಮಾಡಲಾಗಿದೆ ಎಂದು ಬುಧವಾರ ಸಂಸತ್ತಿಗೆ ತಿಳಿಸಲಾಯಿತು. ಸರ್ಕಾರವು ಮೇ 4ರಿಂದ ಜಾರಿಗೆ ಬರುವಂತೆ ಈರುಳ್ಳಿ ರಫ್ತು ನಿಷೇಧವನ್ನು ತೆಗೆದುಹಾಕಿತ್ತು ಮತ್ತು ಪ್ರತಿ ಮೆಟ್ರಿಕ್ ಟನ್ಗೆ 550 ಡಾಲರ್ ಕನಿಷ್ಠ ರಫ್ತು ಬೆಲೆ (ಎಂಇಪಿ)ಯಲ್ಲಿ ಮತ್ತು ಶೇಕಡಾ 40ರಷ್ಟು ರಫ್ತು ಸುಂಕದೊಂದಿಗೆ ರಫ್ತಿಗೆ ಅನುಮತಿ ನೀಡಲಾಗಿತ್ತು.
ಭಾರತವು ಕಳೆದ ಮೂರು ವರ್ಷಗಳಲ್ಲಿ- 2021-22ರಲ್ಲಿ 3,326.99 ಕೋಟಿ ರೂ., 2022-23ರಲ್ಲಿ 4,525.91 ಕೋಟಿ ರೂ., ಮತ್ತು 2023-24ರಲ್ಲಿ 3,513.22 ಕೋಟಿ ರೂ. ನಿವ್ವಳ ರಫ್ತು ಮೌಲ್ಯ ಗಳಿಸಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವ ಬಿ.ಎಲ್.ವರ್ಮಾ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಇದಲ್ಲದೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಬೆಲೆ ನಿಯಂತ್ರಣ ಸಂಗ್ರಹಕ್ಕಾಗಿ ಸರ್ಕಾರವು ಎನ್ಸಿಸಿಎಫ್ ಮತ್ತು ನಾಫೆಡ್ ಮೂಲಕ ಮಹಾರಾಷ್ಟ್ರದಿಂದ 4.68 ಲಕ್ಷ ಟನ್ ಈರುಳ್ಳಿಯನ್ನು ಖರೀದಿಸಿದೆ ಎಂದು ಅವರು ಹೇಳಿದರು. ಕಳೆದ ವರ್ಷಕ್ಕೆ (2023) ಹೋಲಿಸಿದರೆ, ಪ್ರಸಕ್ತ ವರ್ಷದಲ್ಲಿ ಈರುಳ್ಳಿ ರೈತರ ಬೆಲೆ ಗಳಿಕೆ ಹೆಚ್ಚಾಗಿದೆ ಎಂದು ಸಚಿವರು ಹೇಳಿದರು.
2024ರ ಏಪ್ರಿಲ್ ಮತ್ತು ಜುಲೈ ನಡುವೆ ಮಹಾರಾಷ್ಟ್ರದಲ್ಲಿ ಈರುಳ್ಳಿಯ ಸರಾಸರಿ ಮಾಸಿಕ ಮಾರುಕಟ್ಟೆ ಮಾದರಿ ಬೆಲೆಗಳು ಪ್ರತಿ ಕ್ವಿಂಟಾಲ್ಗೆ 1,230ರಿಂದ 2,578 ರೂ.ಗಳ ವ್ಯಾಪ್ತಿಯಲ್ಲಿದ್ದವು. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಬೆಲೆಗಳು ಪ್ರತಿ ಕ್ವಿಂಟಾಲ್ಗೆ 693ರಿಂದ 1,205 ರೂ. ಆಗಿದ್ದವು.