ಮುಂಬೈ(ಮಹಾರಾಷ್ಟ್ರ): ದೇಶದ 127 ವರ್ಷಗಳಷ್ಟು ಹಳೆಯದಾದ ಜನಪ್ರಿಯ ಗೋದ್ರೇಜ್ ಗ್ರೂಪ್ ಇಬ್ಭಾಗವಾಗಿದೆ. ಬೀಗಗಳಿಂದ ಹಿಡಿದು ಸಾಬೂನು, ರಿಯಲ್ ಎಸ್ಟೇಟ್, ಅಂತರಿಕ್ಷಯಾನದವರೆಗೂ ತನ್ನ ಉದ್ಯಮ ಪ್ರಪಂಚ ವಿಸ್ತರಿಸಿಕೊಂಡಿರುವ ಗೋದ್ರೇಜ್ ಸಂಸ್ಥಾಪಕರ ಕುಟುಂಬವು ಇದೀಗ ಸಂಸ್ಥೆಯನ್ನು ವಿಭಜಿಸಲು ಮುಂದಾಗಿದೆ.
ವಿವಿಧ ಉದ್ಯಮ, ಉತ್ಪನ್ನಗಳ ಮೂಲಕ ಗೋದ್ರೇಜ್ ಮನೆ ಮಾತಾಗಿದ್ದು, ಮಂಗಳವಾರ ಇದರ ಸಮೂಹದ ಎರಡು ಕುಟುಂಬಗಳು ಕಂಪನಿಗಳಲ್ಲಿನ ತಮ್ಮ ಷೇರುಗಳ ಮಾಲೀಕತ್ವ ಮರುಹೊಂದಿಕೆ ಬಗ್ಗೆ ಘೋಷಿಸಿವೆ. 1987ರ ಹಿಂದೆ ಸಂಘಟಿತವಾದ ಸಂಸ್ಥೆಯಲ್ಲಿ ಸಾಮರಸ್ಯ ಕಾಪಾಡಿಕೊಳ್ಳಲು ಮತ್ತು ಗೋದ್ರೇಜ್ ಕುಟುಂಬದ ಸದಸ್ಯರ ವಿಭಿನ್ನ ದೃಷ್ಟಿಕೋನಗಳ ಮೂಲಕ ಮಾಲೀಕತ್ವವನ್ನು ಉತ್ತಮವಾಗಿ ಜೋಡಿಸಲು ಗೌರವಯುತ ಮತ್ತು ಜಾಗರೂಕ ರೀತಿಯಲ್ಲಿ ಒಪ್ಪಂದಕ್ಕೆ ಬರಲಾಗಿದೆ ಎಂದು ಕುಟುಂಬದ ಎರಡೂ ಕಡೆಯವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದು ಕಾರ್ಯತಂತ್ರದ ದಿಸೆ, ಗಮನ, ಚುರುಕುತನವನ್ನು ಗರಿಷ್ಠಗೊಳಿಸಲು ಸಹಾಯ ಮಾಡುತ್ತದೆ. ಷೇರುದಾರರಿಗೆ ಮತ್ತು ಇತರ ಎಲ್ಲ ಪಾಲುದಾರರಿಗೆ ದೀರ್ಘಾವಧಿ ಮೌಲ್ಯವನ್ನು ರಚಿಸುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಸಂಬಂಧಿತ ನಿಯಂತ್ರಣ ಅನುಮೋದನೆಗಳನ್ನು ಪಡೆದ ನಂತರ ಮರುಜೋಡಣೆಯನ್ನು ಕಾರ್ಯಗತಗೊಳಿಸಲಾಗುತ್ತದೆ. ಗೋದ್ರೇಜ್ ಎಂಟರ್‌ಪ್ರೈಸಸ್ ಗ್ರೂಪ್ (Godrej Enterprises Group) ಗೋದ್ರೇಜ್ ಮತ್ತು ಬಾಯ್ಸ್ (G&B) ಮತ್ತು ಅದರ ಅಂಗಸಂಸ್ಥೆಗಳನ್ನು ಒಳಗೊಂಡಿದೆ.
ಏರೋಸ್ಪೇಸ್, ವಾಯುಯಾನ, ರಕ್ಷಣೆ, ಇಂಜಿನ್‌ಗಳು ಮತ್ತು ಮೋಟಾರ್‌ಗಳು, ಶಕ್ತಿ, ಭದ್ರತೆ, ಕಟ್ಟಡ ಸಾಮಗ್ರಿಗಳು, ನಿರ್ಮಾಣ, ಹಸಿರು ಕಟ್ಟಡ ಸಲಹೆ, ಇಪಿಸಿ ಸೇವೆಗಳು, ಇಂಟ್ರಾಲಾಜಿಸ್ಟಿಕ್ಸ್, ಆರೋಗ್ಯ ರಕ್ಷಣಾ ಸಾಧನಗಳು, ಬಾಳಿಕೆ ವಸ್ತುಗಳು, ಪೀಠೋಪಕರಣಗಳು, ಒಳಾಂಗಣ ವಿನ್ಯಾಸ, ವಾಸ್ತುಶಿಲ್ಪದ ಫಿಟ್ಟಿಂಗ್‌ಗಳು, ಐಟಿ, ಸಾಫ್ಟ್‌ವೇರ್ ಮತ್ತು ಮೂಲಸೌಕರ್ಯ ಪರಿಹಾರಗಳು. ಹೀಗೆ ಬಹು ಕೈಗಾರಿಕೆಗಳಲ್ಲಿ ಗೋದ್ರೇಜ್ ಗ್ರೂಪ್ ಅಸ್ತಿತ್ವ ಹೊಂದಿದೆ. ಈ ಗುಂಪನ್ನು ಈಗ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಜಮ್ಶಿದ್ ಗೋದ್ರೇಜ್ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿ ನೈರಿಕಾ ಹೋಲ್ಕರ್ ಮತ್ತು ಅವರ ಹತ್ತಿರದ ಕುಟುಂಬಗಳು ನಿಯಂತ್ರಿಸುತ್ತವೆ.