ನವದೆಹಲಿ: ಭಾರತೀಯ ನವೋದ್ಯಮಿಗಳು ಭಾರತದ ಹೊರಗೆ 109 ಯುನಿಕಾರ್ನ್ಗಳನ್ನು ಸ್ಥಾಪಿಸಿದ್ದಾರೆ ಎಂದು ಗ್ಲೋಬಲ್ ಯೂನಿಕಾರ್ನ್ ಇಂಡೆಕ್ಸ್ 2024 ರ ವರದಿ ಹೇಳಿದೆ. ಹಾಗೆಯೇ ಭಾರತೀಯರು ಭಾರತದಲ್ಲಿ 109 ಯುನಿಕಾರ್ನ್ಗಳನ್ನು ಆರಂಭಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಗ್ಲೋಬಲ್ ಯುನಿಕಾರ್ನ್ ಇಂಡೆಕ್ಸ್ ಇದು 2000 ರ ದಶಕದಲ್ಲಿ ಸ್ಥಾಪಿಸಲಾದ ವಿಶ್ವದ ಸ್ಟಾರ್ಟ್ಅಪ್ಗಳಿಗೆ ಶ್ರೇಯಾಂಕ ನೀಡುವ ಸೂಚ್ಯಂಕ ಇದಾಗಿದೆ.
ಕನಿಷ್ಠ ಒಂದು ಬಿಲಿಯನ್ ಡಾಲರ್ ಮೌಲ್ಯದ ಮೂಲ ಬಂಡವಾಳದೊಂದಿಗೆ ಆರಂಭವಾಗುವ ಮತ್ತು ಇನ್ನೂ ಸಾರ್ವಜನಿಕ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರದ ಸ್ಟಾರ್ಟ್ಅಪ್ಗಳನ್ನು ಯುನಿಕಾರ್ನ್ ಎಂದು ಕರೆಯಲಾಗುತ್ತದೆ. ಹುರುನ್ ರಿಸರ್ಚ್ ಇನ್ ಸ್ಟಿಟ್ಯೂಟ್ನ ವರದಿಯ ಪ್ರಕಾರ 67 ಯುನಿಕಾರ್ನ್ಗಳೊಂದಿಗೆ ಭಾರತವು ಜಾಗತಿಕವಾಗಿ ಮೂರನೇ ಸ್ಥಾನದಲ್ಲಿದೆ. ತಲಾ 8 ಬಿಲಿಯನ್ ಡಾಲರ್ ಮೌಲ್ಯದ ಆನ್ - ಡಿಮ್ಯಾಂಡ್ ಡೆಲಿವರಿ ಸ್ಟಾರ್ಟ್ಅಪ್ ಸ್ವಿಗ್ಗಿ ಮತ್ತು ಫ್ಯಾಂಟಸಿ ಸ್ಪೋರ್ಟ್ಸ್ ಪ್ಲಾಟ್ಫಾರ್ಮ್ ಡ್ರೀಮ್ 11 ಹಾಗೂ 7.5 ಬಿಲಿಯನ್ ಡಾಲರ್ ಮೌಲ್ಯದ ರೇಜರ್ ಪೇ ಇವು ಭಾರತದ ಮುಂಚೂಣಿಯ ಯುನಿಕಾರ್ನ್ಗಳಾಗಿವೆ.
"ಭಾರತೀಯ ನವೋದ್ಯಮಿಗಳು ಬೇರೆ ಯಾವುದೇ ದೇಶಕ್ಕಿಂತ ಹೆಚ್ಚು ಕಡಲಾಚೆಯ ಯುನಿಕಾರ್ನ್ಗಳನ್ನು ಆರಂಭಿಸಿರುವುದು ಒಂದು ಮಹತ್ವದ ಅಂಶವಾಗಿದೆ. ಭಾರತೀಯರು ಭಾರತದಲ್ಲಿ ಸ್ಥಾಪಿಸಿರುವ 67 ಯುನಿಕಾರ್ನ್ಗಳಿಗೆ ಹೋಲಿಸಿದರೆ ಭಾರತದ ಹೊರಗೆ 109 ಯುನಿಕಾರ್ನ್ಗಳನ್ನು ಸಹ-ಸ್ಥಾಪಿಸಿದ್ದಾರೆ (ಕೋ ಫೌಂಡಿಂಗ್)" ಎಂದು ವರದಿ ಹೇಳಿದೆ.