ನವದೆಹಲಿ: ಕೇಂದ್ರ ಸರ್ಕಾರದ ಪಿಂಚಣಿ ಯೋಜನೆಯಾಗಿರುವ ಅಟಲ್ ಪಿಂಚಣಿ ಯೋಜನೆ (ಎಪಿವೈ) ಗೆ 2023-24ರಲ್ಲಿ ಹೊಸದಾಗಿ ದಾಖಲೆಯ 12.2 ಮಿಲಿಯನ್ (1 ಕೋಟಿ 22 ಲಕ್ಷ) ನಾಗರಿಕರು ಸೇರ್ಪಡೆಯಾಗಿದ್ದು, ಸರ್ಕಾರದ ಈ ಸಾಮಾಜಿಕ ಭದ್ರತಾ ಯೋಜನೆಯಡಿಯ ಒಟ್ಟು ನೋಂದಾಯಿತರ ಸಂಖ್ಯೆ 66.2 ಮಿಲಿಯನ್ಗೆ ತಲುಪಿದೆ ಎಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಪ್ರಾಧಿಕಾರ (ಪಿಎಫ್ಆರ್ಡಿಎ) ಸಂಗ್ರಹಿಸಿದ ಅಂಕಿ - ಅಂಶಗಳು ತಿಳಿಸಿವೆ.
ಎಪಿವೈ ಅಂಕಿ - ಅಂಶಗಳ ಪ್ರಕಾರ, ಈ ಯೋಜನೆಯಡಿ ನೋಂದಾಯಿಸಲ್ಪಟ್ಟ ಒಟ್ಟು ಖಾತೆಗಳ ಪೈಕಿ ಸುಮಾರು ಶೇಕಡಾ 70.44 ರಷ್ಟು ಖಾತೆಗಳನ್ನು ಸಾರ್ವಜನಿಕ ವಲಯದ ಬ್ಯಾಂಕುಗಳು, ಶೇಕಡಾ 19.80 ರಷ್ಟು ಖಾತೆಗಳನ್ನು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಶೇಕಡಾ 6.18 ರಷ್ಟು ಖಾತೆಗಳನ್ನು ಖಾಸಗಿ ವಲಯದ ಬ್ಯಾಂಕುಗಳು, ಶೇಕಡಾ 0.37 ರಷ್ಟು ಖಾತೆಗಳನ್ನು ಪಾವತಿ ಬ್ಯಾಂಕುಗಳು, ಶೇಕಡಾ 0.62 ರಷ್ಟು ಖಾತೆಗಳನ್ನು ಸಣ್ಣ ಹಣಕಾಸು ಬ್ಯಾಂಕುಗಳು ಮತ್ತು ಶೇಕಡಾ 2.39 ರಷ್ಟು ಖಾತೆಗಳನ್ನು ಸಹಕಾರಿ ಬ್ಯಾಂಕುಗಳ ಮೂಲಕ ತೆರೆಯಲಾಗಿದೆ.
ಮಹಿಳೆಯರು ಮತ್ತು ಯುವಕರಲ್ಲಿ ಹೆಚ್ಚು ಜನಪ್ರಿಯ:ಅಟಲ್ ಪಿಂಚಣಿ ಯೋಜನೆಯು 2023-24ರ ಹಣಕಾಸು ವರ್ಷದ ಕೊನೆಯಲ್ಲಿ ನೋಂದಣಿಗಳಲ್ಲಿ ಶೇಕಡಾ 24 ರಷ್ಟು ಬೆಳವಣಿಗೆಯನ್ನು ಸಾಧಿಸಿದ್ದು, ಒಟ್ಟಾರೆ ಸಂಖ್ಯೆ 64.4 ಮಿಲಿಯನ್ ಆಗಿದೆ. ಎಪಿವೈ ಮಹಿಳೆಯರು ಮತ್ತು ಯುವಕರಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ ಎಂದು ಪಿಎಫ್ಆರ್ಡಿಎ ಅಧ್ಯಕ್ಷ ದೀಪಕ್ ಮೊಹಾಂತಿ ಹೇಳಿದ್ದಾರೆ.
ಹಣಕಾಸು ವರ್ಷ 2024 ರಲ್ಲಿ ನೋಂದಾಯಿಸಲ್ಪಟ್ಟ ಹೊಸ ಖಾತೆಗಳ ಪೈಕಿ ಶೇಕಡಾ 52 ರಷ್ಟು ಮಹಿಳೆಯರಾಗಿದ್ದು ಮತ್ತು ಪ್ರಾರಂಭದಿಂದಲೂ ತೆರೆಯಲ್ಪಟ್ಟಿರುವ ಒಟ್ಟು ಖಾತೆಗಳ ಪೈಕಿ ಶೇಕಡಾ 70 ರಷ್ಟು ಚಂದಾದಾರರು 18 ರಿಂದ 30 ವರ್ಷ ವಯಸ್ಸಿನವರಾಗಿದ್ದಾರೆ.
ಉತ್ತರಪ್ರದೇಶದಲ್ಲಿ ಅತಿ ಹೆಚ್ಚು ನೋಂದಣಿ:ರಾಜ್ಯವಾರು ನೋಂದಣಿಗಳನ್ನು ನೋಡುವುದಾದರೆ- ಉತ್ತರ ಪ್ರದೇಶವು ಅತಿ ಹೆಚ್ಚು 10 ದಶಲಕ್ಷಕ್ಕೂ ಹೆಚ್ಚು ಅಟಲ್ ಪಿಂಚಣಿ ಖಾತೆಗಳನ್ನು ಹೊಂದಿದೆ. ತಲಾ 5 ಮಿಲಿಯನ್ ಖಾತೆಗಳೊಂದಿಗೆ ಬಿಹಾರ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ನಂತರದ ಸ್ಥಾನಗಳಲ್ಲಿವೆ. ಹಾಗೆಯೇ ಮಧ್ಯಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ ಮತ್ತು ಕರ್ನಾಟಕ ತಲಾ 3 ಮಿಲಿಯನ್ ಮತ್ತು ಗುಜರಾತ್, ಒಡಿಶಾ, ಜಾರ್ಖಂಡ್ ತಲಾ 2 ಮಿಲಿಯನ್ ಪಿಂಚಣಿ ಖಾತೆಗಳನ್ನು ಹೊಂದಿವೆ. ಈ 12 ರಾಜ್ಯಗಳು ಶೇ 80 ಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿವೆ.
18 ರಿಂದ 40 ವರ್ಷ ವಯಸ್ಸಿನ ಭಾರತೀಯ ನಾಗರಿಕರು ಬ್ಯಾಂಕ್ ಅಥವಾ ಅಂಚೆ ಕಚೇರಿ ಶಾಖೆಯ ಮೂಲಕ ಎಪಿವೈ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದು. ಈ ಯೋಜನೆಯಡಿ, ಚಂದಾದಾರರು ತಮ್ಮ ಕೊಡುಗೆಯನ್ನು ಅವಲಂಬಿಸಿ 60 ವರ್ಷ ವಯಸ್ಸಿನಿಂದ ತಿಂಗಳಿಗೆ ಕನಿಷ್ಠ 1,000 ರೂ.ಗಳಿಂದ 5,000 ರೂ.ಗಳವರೆಗೆ ಖಾತರಿ ಪಿಂಚಣಿಯನ್ನು ಪಡೆಯುತ್ತಾರೆ. ಚಂದಾದಾರರ ಮರಣದ ಸಂದರ್ಭದಲ್ಲಿ ಪಿಂಚಣಿಯನ್ನು ಸಂಗಾತಿಗೆ ಪಾವತಿಸಲಾಗುತ್ತದೆ.
ಇದನ್ನೂ ಓದಿ : ಬೇಳೆ ಕಾಳುಗಳ ದಾಸ್ತಾನಿಗೆ ಮಿತಿ: ಬೆಲೆಯೇರಿಕೆ ತಡೆಗೆ ಕೇಂದ್ರದ ಕ್ರಮ - stock limit for pulses