ಪಿಥೋರಗಢ (ಉತ್ತರಾಖಂಡ):ಯುವಕನೊಬ್ಬವಿವಾಹಿತ ಮಹಿಳೆಯೊಬ್ಬರನ್ನು ಮದುವೆಯಾಗುತ್ತೇನೆ ಎಂದು ಪ್ರೀತಿಸಿ, ಮೋಸ ಮಾಡಿರುವ ವಿಚಿತ್ರ ಘಟನೆಯೊಂದು ಪಿಥೋರಗಢ ಜಿಲ್ಲೆಯ ಗ್ರಾಮವೊಂದರಲ್ಲಿ ಬೆಳಕಿಗೆ ಬಂದಿದೆ. ವಿವಾಹಿತ ಮಹಿಳೆಯೊಬ್ಬರು, ಯುವಕನೊಬ್ಬ ತನ್ನನ್ನು ಪ್ರೀತಿಸುವಂತೆ ನಟಿಸಿ, ಈಗ ಬೇರೊಂದು ಯುವತಿಯನ್ನು ಮದುವೆಯಾಗಿ ಯುವಕ ತನಗೆ ಮೋಸ ಮಾಡಿರುವುದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಏನಿದು ಘಟನೆ?: ವಿವಾಹಿತ ಮಹಿಳೆ ಅಪರಿಚಿತ ಯುವಕನನ್ನು ಪ್ರೀತಿಸುತ್ತಿದ್ದರು. ಯುವಕನ ಜೊತೆಗಿನ ವಿವಾಹೇತರ ಸಂಬಂಧದಿಂದ ಮಹಿಳೆಯ ಕುಟುಂಬದಲ್ಲಿ ಗಲಾಟೆ ಸೃಷ್ಟಿಯಾಗಿ, ಪತಿ ಹಾಗೂ ಪತ್ನಿ ನಡುವೆ ವಿಚ್ಛೇದನದ ಸನ್ನಿವೇಶ ನಿರ್ಮಾಣವಾಗಿತ್ತು. ಇತ್ತ ಕಡೆ ಯುವಕ ಕೂಡ ಮಹಿಳೆಗೆ ಪತಿಯಿಂದ ವಿಚ್ಛೇದನ ಪಡೆಯುವಂತೆ ಒತ್ತಾಯಿಸಿದ್ದ. ಅದರಂತೆ ಮಹಿಳೆ ಪತಿಯಿಂದ ವಿಚ್ಛೇದನಕ್ಕಾಗಿ ಅರ್ಜಿಯನ್ನೂ ಸಲ್ಲಿಸಿದ್ದರು. ಆದರೆ, ವಿಚ್ಛೇದನ ಪ್ರಕ್ರಿಯೆ ನ್ಯಾಯಾಲಯದಲ್ಲಿ ನಡೆಯುತ್ತಿರುವಾಗಲೇ ಯುವಕ ಮಹಿಳೆಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ಯುವಕ ಮದುವೆಯಾಗಲು ನಿರಾಕರಿಸಿದ್ದು ಮಾತ್ರವಲ್ಲದೆ, ಮಾರ್ಚ್ 22ರಂದು ಯುವಕ ಮಹಿಳೆಗೆ ತಿಳಿಸದೇ, ಮತ್ತೊಂದು ಯುವತಿಯ ಜೊತೆಗೆ ಮದುವೆಯಾಗಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆಯು ಯುವಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ವಂಚಿಸಿದ ಯುವಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.