ಅಯೋಧ್ಯೆ(ಉತ್ತರ ಪ್ರದೇಶ):ರಾಮ ಮಂದಿರದ ಸಂಕೀರ್ಣದೊಳಗೆ ಪೂಜಾ ಕಾರ್ಯಗಳನ್ನು ನೆರವೇರಿಸುವ ಪುರೋಹಿತರು ಇನ್ನು ಮುಂದೆ ಹೊಸ ಮಾದರಿಯ ವಿಶಿಷ್ಟ ಉಡುಗೆಗಳನ್ನು ಧರಿಸಲಿದ್ದಾರೆ. ಪುರೋಹಿತರಿಗೆ 'ಹಳದಿ ಚೌಬಂದಿ ಮತ್ತು ಬಿಳಿ ಧೋತಿ' ಎಂಬ ಹೊಸ ಡ್ರೆಸ್ ಕೋಡ್ ಘೋಷಿಸಲಾಗಿದೆ. ಅಂದರೆ ಅವರು ಇನ್ನು ಮುಂದೆ ಹಳದಿ ನಿಲುವಂಗಿ ಹಾಗೂ ಶ್ವೇತ ವರ್ಣದ ಧೋತರ ಉಡಲಿದ್ದಾರೆ.
ಸಾಮಾನ್ಯವಾಗಿ ದೇವಾಲಯದ ಅರ್ಚಕರು ಕೇಸರಿ ನಿಲುವಂಗಿ ಮತ್ತು ಬಿಳಿ ಧೋತಿಯನ್ನು ಧರಿಸುತ್ತಾರೆ. ಆದರೆ ರಾಮ ಜನ್ಮಭೂಮಿ ದೇವಾಲಯದ ಅರ್ಚಕರು ಇದಕ್ಕೆ ಭಿನ್ನವಾಗಿ ಹಳದಿ ಬಣ್ಣದ ನಿಲುವಂಗಿ ಧರಿಸಲಿದ್ದಾರೆ.
ರಾಮ ಜನ್ಮಭೂಮಿ ದೇವಾಲಯದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ಐಎಎನ್ಎಸ್ ಜೊತೆ ಮಾತನಾಡಿ, ಈ ಕ್ರಮದ ಹಿಂದಿನ ಉದ್ದೇಶದ ಬಗ್ಗೆ ವಿವರಿಸಿದರು.
"ಪ್ರತೀ ದೇವಾಲಯಕ್ಕೂ ಅದರದೇ ಆದ ಒಂದು ಗುರುತು ಇದೆ. ರಾಮ ಜನ್ಮಭೂಮಿ ದೇವಾಲಯದ ವಿಶಿಷ್ಟತೆ ಮತ್ತು ಅನನ್ಯ ಗುರುತನ್ನು ಪ್ರದರ್ಶಿಸಲು ಹೊಸ ಡ್ರೆಸ್ ಕೋಡ್ ಅನ್ನು ಜಾರಿಗೆ ತರಲಾಗಿದೆ. ಪುರೋಹಿತರಿಗೆ ಒಂದು ಜೋಡಿ ಹಳದಿ ಚೌಬಂದಿ ಮತ್ತು ಬಿಳಿ ಧೋತಿಯನ್ನು ನೀಡಲಾಗಿದೆ. ಇದೊಂದು ವಿಶಿಷ್ಟತೆಯನ್ನು ಸೂಚಿಸುತ್ತದೆ. ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಲಾಂಛನವನ್ನು ಸಹ ಚೌಬಂದಿಯ ಮೇಲೆ ಅಚ್ಚು ಹಾಕಲಾಗಿದೆ. ಇದು ರಾಮ ಜನ್ಮಭೂಮಿ ದೇವಾಲಯದ ಅರ್ಚಕರನ್ನು ದೇಶದ ಇತರ ದೇವಾಲಯಗಳಿಗಿಂತ ವಿಭಿನ್ನವಾಗಿಸುತ್ತದೆ." ಎಂದು ರಾಮ ದೇವಾಲಯದ ಪ್ರಧಾನ ಅರ್ಚಕರು ಹೇಳಿದರು.