ಸಮಾಜಕ್ಕೆ ಹಿರಿಯ ನಾಗರಿಕರ ಕೊಡುಗೆ ಮತ್ತು ಅವರ ಸಾಧನೆಗಳನ್ನು ಗೌರವಿಸುವ ಉದ್ದೇಶದಿಂದ ಪ್ರತಿವರ್ಷ ಆಗಸ್ಟ್ 21ರಂದು 'ವಿಶ್ವ ಹಿರಿಯ ನಾಗರಿಕರ ದಿನ'ವನ್ನಾಗಿ ಆಚರಿಸಲಾಗುತ್ತದೆ. ಈ ದಿನದ ಮೂಲಕ ಹಿರಿಯ ನಾಗರಿಕರು ಸಮುದಾಯಕ್ಕೆ ನೀಡಿರುವ ಮೌಲ್ಯಯುತ ಜ್ಞಾನ, ಅನುಭವಗಳನ್ನು ಗುರುತಿಸಲಾಗುತ್ತಿದೆ. ಇದೇ ವೇಳೆ, ಅವರು ಎದುರಿಸುವ ಸಮಸ್ಯೆಗಳ ಕುರಿತೂ ಅರಿವು ಮೂಡಿಸುವ ಪ್ರಯತ್ನವೂ ನಡೆಯುತ್ತದೆ.
ಇತಿಹಾಸ: ಅಮೆರಿಕದ ಮಾಜಿ ಅಧ್ಯಕ್ಷ ರೋನಾಲ್ಡ್ ರೀಗನ್ ಅವರ ಪ್ರಯತ್ನ ಈ ದಿನದ ಹಿಂದಿದೆ. 1988ರಲ್ಲಿ ಅವರು ಅಮೆರಿಕದಲ್ಲಿ ಆಗಸ್ಟ್ 21ನ್ನು ಹಿರಿಯ ನಾಗರಿಕರ ದಿನವಾಗಿ ಘೋಷಿಸಿದರು. ಈ ದಿನದಂದು ಹಿರಿಯ ನಾಗರಿಕರ ಸಾಧನೆ ಮತ್ತು ಕೊಡುಗೆಗಳನ್ನು ಗೌರವಿಸುವುದರೊಂದಿಗೆ ಅವರ ಬೆಂಬಲ ಮತ್ತು ಯೋಗಕ್ಷೇಮಕ್ಕೆ ಅಗತ್ಯ ನೀತಿ ಮತ್ತು ಕಾರ್ಯಕ್ರಮಗಳನ್ನು ರೂಪಿಸುವ ಮಹತ್ವದ ಕುರಿತು ಕೂಡಾ ತಿಳಿಸಲಾಗುತ್ತದೆ.
ಅಮೆರಿಕದ ನಂತರ ಈ ದಿನ ನಿಧಾನವಾಗಿ ಜಾಗತಿಕ ಮಟ್ಟದಲ್ಲಿ ವಿಸ್ತರಿಸಿತು. ಪ್ರಪಂಚಾದ್ಯಂತ ಹಿರಿಯ ನಾಗರಿಕರ ಪಾತ್ರವನ್ನು ಗುರುತಿಸುವುದು, ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವುದು, ಆ ಮೂಲಕ ಯುವ ಪೀಳಿಗೆಗೆ ಮಾರ್ಗದರ್ಶನ ನೀಡುವುದು ಈ ದಿನಾಚರಣೆಯ ಹಿಂದಿನ ಸದುದ್ದೇಶಗಳು.
ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ, 2030ರ ಹೊತ್ತಿಗೆ, 6ರಲ್ಲಿ ಒಬ್ಬರು 60 ವರ್ಷ ಮೇಲ್ಪಟ್ಟವರು ಇರಲಿದ್ದಾರೆ. 2020ರಲ್ಲಿ 1 ಬಿಲಿಯನ್ ಇದ್ದ ಹಿರಿಯ ನಾಗರಿಕ ಸಂಖ್ಯೆ 2050ರ ವೇಳೆಗೆ 1.4 ಬಿಲಿಯನ್ ಇರಲಿದೆ. ವಿಶ್ವ ಜನಸಂಖ್ಯೆಯಲ್ಲಿ 60 ವರ್ಷ ಮೇಲ್ಪಟ್ಟವರ ಸಂಖ್ಯೆ ದುಪ್ಪಟ್ಟಾಗಲಿದೆ. 80 ವರ್ಷ ಮೇಲ್ಪಟ್ಟವರ ಸಂಖ್ಯೆ 2050ರ ಸುಮಾರಿಗೆ ಮೂರು ಪಟ್ಟು ಹೆಚ್ಚಲಿದ್ದು, 426 ಮಿಲಿಯನ್ ಆಗಲಿದೆ ಎಂಬುದು ಒಂದು ಅಂದಾಜು.
ಹಿರಿಯ ನಾಗರಿಕರು ಎದುರಿಸುತ್ತಿರುವ ಸವಾಲುಗಳು, ಸಮಸ್ಯೆಗಳು:
- ವಯಸ್ಸಾಗುವಿಕೆ, ಮಾನೋವೈಜ್ಞಾನಿಕ ಯೋಗಕ್ಷೇಮ
- ಆರ್ಥಿಕ ಅಭದ್ರತೆ
- ದೈನಂದಿನ ಕೆಲಸದಲ್ಲಿ ತೊಂದರೆ ಮತ್ತು ಚಲನಶೀಲತೆಯ ಸಮಸ್ಯೆ
- ಸರಿಯಾದ ಆರೈಕೆಗಾಗಿ ಹುಡುಕಾಟ
- ಆರೋಗ್ಯ ಸೇವೆಯ ಲಭ್ಯತೆ
ಭಾರತದಲ್ಲಿ ಹಿರಿಯ ನಾಗರಿಕರ ಪರಿಸ್ಥಿತಿ ಹೇಗಿದೆ?:ಭಾರತದಲ್ಲಿ 60 ವರ್ಷ ಮೇಲ್ಪಟ್ಟವರನ್ನು ಹಿರಿಯ ನಾಗರಿಕರು ಎಂದು ಗುರುತಿಸಲಾಗಿದೆ. ಭಾರತದಲ್ಲೂ ಕೂಡ ಹಿರಿಯ ನಾಗರಿಕರ ಸಂಖ್ಯೆ ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ಅವರ ಜೀವಿತಾವಧಿ ಕೂಡ ಹೆಚ್ಚಿದೆ.
ವರದಿ ಪ್ರಕಾರ, ರಿಯಲ್ ಎಸ್ಟೇಟ್ ಸಂಸ್ಥೆ ಸಿಬಿಆರ್ಇ ಸೌತ್ ಏಷ್ಯಾ ಪ್ರೈವೇಟ್ ಲಿಮಿಟೆಡ್, ಭಾರತದಲ್ಲಿ ಹಿರಿಯ ಆರೈಕೆಯ ಭವಿಷ್ಯವನ್ನು ವಿಶ್ಲೇಷಿಸಿದೆ. 2024ರಲ್ಲಿ ಹಿರಿಯ ಜೀವನ ಸೌಲಭ್ಯಗಳ ಅಂದಾಜು ಗುರಿ ಒಂದು ಮಿಲಿಯನ್ ಆಗಿದ್ದು, ಮುಂದಿನ 10 ವರ್ಷಗಳಲ್ಲಿ 2.5 ಮಿಲಿಯನ್‌ಗೆ ಹೆಚ್ಚಾಗುವ ನಿರೀಕ್ಷೆಯಿದೆ.
ಪ್ರಸ್ತುತ, ಭಾರತದಲ್ಲಿ 150 ಮಿಲಿಯನ್ ಹಿರಿಯರಿದ್ದು, ಈ ಸಂಖ್ಯೆ ಮುಂದಿನ 10-12 ವರ್ಷಕ್ಕೆ 230 ಮಿಲಿಯನ್ ಆಗಬಹುದು. ದೇಶದಲ್ಲಿ ಹಿರಿಯರ ಬೆಳವಣಿಗೆಗೆ ಗಣನೀಯ ಪ್ರಮಾಣದಲ್ಲಿ ಆಗುತ್ತಿದ್ದು, ಹೆಚ್ಚುತ್ತಿರುವ ದೀರ್ಘಕಾಲದ ಪರಿಸ್ಥಿತಿಗಳು ಮತ್ತು ಹೆಚ್ಚುತ್ತಿರುವ ಜಾಗೃತಿ ಇದಕ್ಕೆ ಕಾರಣ. ಹಿರಿಯ ನಾಗರಿಕರಿಗೆ ಕೌಶಲ್ಯಯುತ ಆರೈಕೆ ಮತ್ತು ಜೀವನಶೈಲಿ ಆಯ್ಕೆ, ಹಿರಿಯರ ನಾಗರೀಕರ ಜೀವನ ಸೌಲಭ್ಯದ ಬೇಡಿಕೆಗಳು ಇತ್ತೀಚಿನ ದಿನಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿವೆ.
ಹಿರಿಯ ನಾಗರಿಕರಿಗೆ ಸರ್ಕಾರದ ಯೋಜನೆಗಳೇನು?: ಹಿರಿಯರ ಆರೈಕೆಗೆ ಸಂಬಂಧಿಸಿದ ಸವಾಲುಗಳು ಮತ್ತು ಅವಕಾಶಗಳನ್ನು ವಿವಿಧ ಸಾಂವಿಧಾನಿಕ ನಿಬಂಧನೆಗಳ ಮೂಲಕ ಪರಿಹರಿಸಲಾಗುತ್ತಿದೆ. ಉದಾಹರಣೆಗೆ, ಸಂವಿಧಾನದ 41ನೇ ವಿಧಿ ಪಾಲಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆ, 1999ರ ಹಿರಿಯ ವ್ಯಕ್ತಿಗಳ ರಾಷ್ಟ್ರೀಯ ನೀತಿಯಂತೆ ನೀತಿಗಳು, ಯೋಜನೆಗಳು ಮತ್ತು ಕಾರ್ಯಕ್ರಮಗಳು, ಅಟಲ್ ವಯೋ ಅಭ್ಯುದಯ ಯೋಜನೆ, ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ, ಅಟಲ್ ಪಿಂಚಣಿ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಇತ್ಯಾದಿ ಯೋಜನೆಯನ್ನು ಪರಿಚಯಿಸಲಾಗಿದೆ.
ಪ್ರಧಾನ ಮಂತ್ರಿ ವಯ ವಂದನಾ ಯೋಜನೆ: ಎಲ್ಐಸಿಯಿಂದ ನೀಡಲಾಗುವ ಈ ಯೋಜನೆ ನಿವೃತ್ತಿ ಮತ್ತು ಪಿಂಚಣಿ ಯೋಜನೆಯಾಗಿದೆ. ಇದು 10 ವರ್ಷಗಳ ಕಾಲ ನಿಗದಿತ ದರದಲ್ಲಿ ಗ್ಯಾರಂಟಿ ಮೊತ್ತದ ಪಿಂಚಣಿ ನೀಡಲಾಗುವುದು. ವ್ಯಕ್ತಿಗಳ ಸಾವಿನ ಬಳಿಕ ನಾಮಿನಿಗಳಿಗೂ ಕೂಡಾ ಪ್ರಯೋಜನವನ್ನು ಈ ಯೋಜನೆ ಹೊಂದಿದೆ.
ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆ: 60 ವರ್ಷ ಮೇಲ್ಪಟ್ಟ ಬಡತನ ರೇಖೆಯಿಂದ ಕೆಳಗಿರುವವರಿಗೆ ಇದು ವಿಶೇಷ ಸೌಲಭ್ಯ ಹೊಂದಿದೆ. ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಇದನ್ನು ಪರಿಚಯಿಸಲಾಗಿದೆ. ಇದು ರಾಷ್ಟ್ರೀಯ ಸಾಮಾಜಿಕ ಸಹಾಯ ಯೋಜನೆ ಭಾಗ.
ಹಿರಿಯರ ಆರೋಗ್ಯ ರಕ್ಷಣೆಗಾಗಿ ರಾಷ್ಟ್ರೀಯ ಕಾರ್ಯಕ್ರಮ: 2010-11ರಲ್ಲಿ ಹಿರಿಯ ನಾಗರಿಕರಿಗೆ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆ ಪರಿಹರಿಸಲು ಇದನ್ನು ಪರಿಚಯಿಸಲಾಗಿದೆ. ಇದರ ಮುಖ್ಯ ಉದ್ದೇಶ ಜಿಲ್ಲಾ ಮಟ್ಟದಲ್ಲಿ ರಾಜ್ಯ ಆರೋಗ್ಯ ಸೊಸೈಟಿಯ ಮೂಲಕ ಜಿಲ್ಲಾ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಉಪ-ಕೇಂದ್ರಗಳು ಹಂತಗಳಲ್ಲಿ ಮೀಸಲಾದ ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು.
ರಾಷ್ಟ್ರೀಯ ವಯೋಶ್ರೀ ಯೋಜನಾ: ಬಿಪಿಎಲ್ ವರ್ಗಕ್ಕೆ ಸೇರಿದ ಹಿರಿಯ ನಾಗರಿಕರಿಗೆ ದೈಹಿಕ ನೆರವು ಮತ್ತು ಸಹಾಯ ಒದಗಿಸುವ ಯೋಜನೆಯಾಗಿದೆ. ಇದು ಕೇಂದ್ರ ವಲಯದ ಯೋಜನೆಯಾಗಿದ್ದು, ಕೇಂದ್ರದಿಂದ ಸಂಪೂರ್ಣ ನಿಧಿ ಭರಿಸಲಾಗುವುದು. ಈ ಯೋಜನೆಯ ಅನುಷ್ಠಾನಕ್ಕೆ ಹಿರಿಯ ನಾಗರಿಕರ ಕಲ್ಯಾಣ ನಿಧಿಯಿಂದ ಹಣ ಭರಿಸಲಾಗುವುದು.
ಮೆಡಿಕ್ಲೈಮ್ ನೀತಿ: ಹಿರಿಯ ನಾಗರಿಕರಿಗೆ ಔಷಧಿ, ರಕ್ತ, ಆಂಬ್ಯುಲೆನ್ಸ್ ಚಾರ್ಜ್ ಮತ್ತು ಇತರೆ ಡಯಾಗ್ನಸಿಸ್ ಸಂಬಂಧ ವೆಚ್ಚದ ಸಹಾಯ ನೀಡಲಾಗುವುದು. 60ರಿಂದ 80 ವರ್ಷದೊಳಗಿನವರಿಗೆ ಈ ಸೇವೆಯನ್ನು ವಿನ್ಯಾಸ ಮಾಡಲಾಗಿದೆ. ಅವರ ಆರೋಗ್ಯ ಸಂಬಂಧಿತ ವೆಚ್ಚ ಪೂರೈಸಲು ಈ ಯೋಜನೆ ಸಹಾಯ ಮಾಡಲಿದೆ. ಜೊತೆಗೆ ಸೆಕ್ಷನ್ 80ಡಿ ಅಡಿಯಲ್ಲಿ ಅವರಿಗೆ ಪ್ರೀಮಿಯಂ ಪಾವತಿಯಲ್ಲಿ ತೆರಿಗೆ ಪ್ರಯೋಜನ ನೀಡಲಾಗುವುದು. ಆದಾಗ್ಯೂ ಇದರ ಅವಧಿ ಒಂದು ವರ್ಷವಾಗಿದ್ದು, 90 ವರ್ಷದವರೆಗೆ ವಿಸ್ತರಣೆ ಮಾಡಬಹುದು.
ಇದನ್ನೂ ಓದಿ:ವಿಶ್ವ ಮಾನವೀಯ ದಿನ: ಮಾನವೀಯತೆಯಿಂದ ಕೆಲಸ ಮಾಡಿ