ಹೈದರಾಬಾದ್:ಪೋಷಕರು ಮತ್ತು ಹೆಣ್ಣುಮಕ್ಕಳ ನಡುವಿನ ಅನನ್ಯ ಸಂಬಂಧವನ್ನು ಆಚರಿಸಲು ಪ್ರತಿ ವರ್ಷ ಸೆಪ್ಟೆಂಬರ್ ನಾಲ್ಕನೇ ಭಾನುವಾರದಂದು ಮಗಳ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ, ಆ ದಿನ ಸೆಪ್ಟೆಂಬರ್ 22 ರಂದು ಬಂದಿದೆ. ತಮ್ಮ ಜೀವನದಲ್ಲಿ ದೊರೆತಿರುವ ಅಮೂಲ್ಯವಾದ ಸಂಪತ್ತು ಮಗಳನ್ನು ಗೌರವಿಸಲು ಮತ್ತು ಖುಷಿಯಾಗಿಡಲು ತಂದೆ ತಾಯಿಗೆ ಇದೊಂದು ವಿಶೇಷ ದಿನ.
ತಂದೆ ತಾಯಿಗೆ ಮಗಳೆಂದರೆ ಒಂದು ಅನನ್ಯ ಆಶೀರ್ವಾದ. ಪೋಷಕರ ಜೀವನವನ್ನು ಅಪಾರ ಸಂತೋಷ ಮತ್ತು ಪ್ರೀತಿಯಿಂದ ಸಮೃದ್ಧಗೊಳಿಸುವವಳು ಮಗಳು. ಮಗಳೆಂದರೆ ಗೆಳತಿ, ಪೋಷಕರ ಸಂತೋಷದ ಚಿಲುಮೆ. ಮಗಳಾದವಳು ಪೋಷಕರ ಜೀವನಕ್ಕೆ ಸಂತೋಷವನ್ನು ತರುತ್ತಾಳೆ. ಎತ್ತರಕ್ಕೆ ಕೊಂಡೊಯ್ಯುತ್ತಾಳೆ, ಅಮೂಲ್ಯವಾದ ಪಾಠ ಹೇಳಿಕೊಡುತ್ತಾಳೆ.
ಅಂತಾರಾಷ್ಟ್ರೀಯ ಮಗಳ ದಿನಾಚರಣೆ ಹಿನ್ನೆಲೆ: ಹೆಣ್ಣು ಮಗುವೆಂದರೆ ಕಳಂಕ, ಹೆಣ್ಣು ಮಗುವೆಂದರೆ ಹೊಣೆಗಾರಿಕೆಯೆಂಬ ಭಾರ ಎನ್ನವುದರ ವಿರುದ್ಧ, ಮಹಿಳೆಯರನ್ನು ಗೌರವಿಸುವ ಸಲುವಾಗಿ ಅಂತಾರಾಷ್ಟ್ರೀಯ ಮಗಳ ದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು. ಈ ದಿನದ ನಿಖರವಾದ ಆರಂಭ ತಿಳಿದಿಲ್ಲವಾದರೂ, ಭಾರತದಂತಹ ಅನೇಕ ದೇಶಗಳಲ್ಲಿ ಮಗಳಿಗಾಗಿ ಗೊತ್ತುಪಡಿಸಿದ ದಿನ ತಾರತಮ್ಯವನ್ನು ಎದುರಿಸಲು ಮತ್ತು ಹೆಣ್ಣು ಮಕ್ಕಳ ವಿರುದ್ಧದ ಅಪರಾಧಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಈ ದಿನದಂದು, ಸಂಸ್ಥೆಗಳು ಮತ್ತು ಸರ್ಕಾರಗಳು ಲಿಂಗ ತಾರತಮ್ಯವನ್ನು ಎದುರಿಸಲು ಮತ್ತು ಮಗನಂತೆ ಮಗಳಿಗೂ ಸಮಾನ ಅವಕಾಶಗಳನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿರುತ್ತವೆ.
ಅಂತಾರಾಷ್ಟ್ರೀಯ ಮಗಳ ದಿನದ ಮಹತ್ವ:ಅಂತಾರಾಷ್ಟ್ರೀಯ ಮಗಳ ದಿನ, ಹುಡುಗಿಯರು ಹಾಗೂ ಯುವತಿಯರನ್ನು ಬೆಂಬಲಿಸುವುದು ಹಾಗೂ ಅವರ ಸಬಲೀಕರಣಕ್ಕೆ ಮಹತ್ವ ನೀಡುವುದನ್ನು ಒತ್ತಿ ಹೇಳುತ್ತದೆ. ಈ ದಿನ ಇತಿಹಾಸದುದ್ದಕ್ಕೂ ಕುಟುಂಬಗಳಲ್ಲಿನ ಮಗಳಷ್ಟೇ ಅಲ್ಲ, ವಿಶ್ವದಾದ್ಯಂತ ಮಹಿಳೆಯರ ಸಾಧನೆಗಳನ್ನು ಜ್ಞಾಪಕವಾಗಿ ಕಾರ್ಯನಿರ್ವಹಿಸುತ್ತದೆ.
ನಾವು ಅಂತಾರಾಷ್ಟ್ರೀಯ ಮಗಳ ದಿನ ಏಕೆ ಆಚರಿಸುತ್ತೇವೆ?
- ಹುಡುಗಿಯರನ್ನು ಅನಾನುಕೂಲಕ್ಕೆ ಒಳಪಡಿಸುವಂತಹ ಸಾಂಪ್ರದಾಯಿಕ ನಂಬಿಕೆಗಳನ್ನು ಪ್ರಶ್ನಿಸುವ ಗುರಿಯನ್ನು ಈ ಅಂತಾರಾಷ್ಟ್ರೀಯ ಮಗಳ ದಿನಾಚರಣೆ ಹೊಂದಿದೆ.
- ಪೋಷಕರು ತಮ್ಮ ಹೆಣ್ಣುಮಕ್ಕಳಿಗೆ ಕೃತಜ್ಞತೆಯನ್ನು ತೋರಿಸಲು ಮತ್ತು ಶಿಕ್ಷಣ, ಜೀವನ ಕೌಶಲ್ಯ ಮತ್ತು ಕ್ರೀಡೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮಗನಿಗೆ ನೀಡುವ ಅದೇ ಅವಕಾಶಗಳನ್ನು ನೀಡುವಂತೆ ಒತ್ತಾಯಿಸುತ್ತದೆ.
- ಮಗಳ ದಿನ ವಿಶ್ವದಾದ್ಯಂತ ಹೆಣ್ಣುಮಕ್ಕಳು ಎದುರಿಸುತ್ತಿರುವ.. ಉದಾಹರಣೆಗೆ ಆರೋಗ್ಯ ಸೌಲಭ್ಯದ ಕೊರತೆ, ಕಾನೂನು ಹಕ್ಕುಗಳು, ಪೋಷಣೆ ಮತ್ತು ತಾರತಮ್ಯ, ಹಿಂಸೆ ಮತ್ತು ಬಲವಂತದ ಬಾಲ್ಯ ವಿವಾಹದಿಂದ ರಕ್ಷಣೆಯಂತಹ ಅಸಮಾನತೆಗಳ ಬಗ್ಗೆ ಗಮನ ಸೆಳೆಯುವ ಗುರಿಯನ್ನು ಹೊಂದಿದೆ.
- ಹೆಣ್ಣು ಮಕ್ಕಳನ್ನು ಗೌರವಿಸಲು ಮತ್ತು ಪ್ರಶಂಸಿಸಲು ಮತ್ತು ಅವರು ಮಗನಷ್ಟೇ ಮೌಲ್ಯಯುತರು ಎಂದು ಎಲ್ಲರಿಗೂ ನೆನಪಿಸಲು ಅಂತಾರಾಷ್ಟ್ರೀಯ ಮಗಳ ದಿನವನ್ನು ಆಚರಿಸಲಾಗುತ್ತದೆ.
- ಹೆಣ್ಣುಮಕ್ಕಳ ದಿನವು ಪೋಷಕರು ಮತ್ತು ಹೆಣ್ಣುಮಕ್ಕಳ ನಡುವಿನ ಬಾಂಧವ್ಯವನ್ನು ಆಚರಿಸಲು ವಿಶೇಷ ದಿನವಾಗಿದೆ.
ಮಗಳ ದಿನವನ್ನು ಹೀಗೆ ಆಚರಿಸಿ:
- ನಿಮ್ಮ ಮಗಳಿಗೆ ಸಂಗೀತ ವಾದ್ಯ, ಪುಸ್ತಕಗಳು ಅಥವಾ ಕ್ರೀಡಾ ಸಲಕರಣೆಗಳಂತಹ ಉತ್ತಮ ಹವ್ಯಾಸಗಳನ್ನು ಬೆಳೆಸುವಂತಹ ಉಡುಗೊರೆಯನ್ನು ನೀಡಿ. ಆಭರಣ, ವಿಶೇಷ ನೆನಪಿನ ಪುಸ್ತಕ ಅಥವಾ ಅವರಿಗೆಂದೇ ಮಾಡಿಸಿದ ಉಡುಗೊರೆ ಬುಟ್ಟಿಯಂತಹ ಕಸ್ಟಮ್ ಉಡುಗೊರೆಯನ್ನು ಅವಳಿಗೆ ಕೊಡುವ ಮೂಲಕ ಮಗಳ ಸಂಭ್ರಮವನ್ನು ಇಮ್ಮಡಿಗೊಳಿಸಬಹುದು.
- ಬಹಳಷ್ಟು ಕುಟುಂಬಗಳು ಒಳ್ಳೆಯ ಊಟಕ್ಕಾಗಿ ಹೊರಗೆ ಹೋಗುವುದು, ಚಲನಚಿತ್ರವನ್ನು ನೋಡುವುದು, ಅಥವಾ ತಮ್ಮ ಮಗಳು ಇಷ್ಟಪಡುವ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಒಟ್ಟಿಗೆ ಸಮಯ ಕಳೆಯಲು ನಿರ್ಧರಿಸುತ್ತಾರೆ.
- ಬೆಂಬಲ, ನಿರ್ದೇಶನ ಮತ್ತು ಪ್ರೀತಿಯನ್ನು ನೀಡುವ ಮೂಲಕ ನಿಮ್ಮ ಮಗಳೊಂದಿಗೆ ಪ್ರಾಮಾಣಿಕ ಮತ್ತು ಮಹತ್ವದ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಿ.
- ತಂತ್ರಜ್ಞಾನದ ಆಧುನಿಕ ಯುಗದಲ್ಲಿ, ಹಲವಾರು ಕುಟುಂಬಗಳು ತಮ್ಮ ಹೆಣ್ಣುಮಕ್ಕಳ ಗೌರವ ಮತ್ತು ಫೋಟೋಗಳನ್ನು ಹಂಚಿಕೊಳ್ಳಲು, ಅವರ ಸಾಧನೆಗಳನ್ನು ಗುರುತಿಸಲು ಮತ್ತು ಪ್ರೀತಿ ಮತ್ತು ಹೆಮ್ಮೆಯ ಸಂದೇಶಗಳನ್ನು ತಿಳಿಸಲು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳಿ.
ನಿಮ್ಮ ಹೆಣ್ಣುಮಕ್ಕಳ ಬಗ್ಗೆ ನೀವು ಹೆಮ್ಮೆಪಡುತ್ತೀರಿ ಮತ್ತು ಪ್ರೀತಿಸುತ್ತೀರಿ ಎಂಬುದನ್ನು ಯಾವುದೇ ವಿಧದಲ್ಲಾದರೂ ತೋರಿಸಿದರೆ ಅವರು ಖುಷಿಯಾಗುತ್ತಾರೆ.
ಇದನ್ನೂ ಓದಿ:ಇಂದು ವಿಶ್ವ ಘೇಂಡಾಮೃಗ ದಿನ: ಒಂದು ಇಮೇಲ್ನಿಂದ ಶುರುವಾಗಿತ್ತು ಈ ವಿಶೇಷ ದಿನಾಚರಣೆ! - World Rhino Day