ಕರ್ನಾಟಕ

karnataka

ETV Bharat / bharat

ಪ್ರೀತಿ ತಿರಸ್ಕರಿಸಿದ್ದ ಶಿಕ್ಷಕನ ಮೇಲೆ ದ್ವೇಷ - ಪತ್ನಿ, ಪುತ್ರಿಯ ಮಾನಹಾನಿ: ಪೋಕ್ಸೋ ಕಾಯ್ದೆಯಡಿ ಯುವತಿ ಅರೆಸ್ಟ್ - ಪೋಕ್ಸೋ ಕಾಯ್ದೆ

ವಿವಾಹಿತ ಶಿಕ್ಷಕನ ಪತ್ನಿ ಹಾಗೂ ಆತನ 11 ವರ್ಷದ ಪುತ್ರಿಯ ಮಾರ್ಫ್ ಮಾಡಿದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಆರೋಪದ ಮೇಲೆ ಯುವತಿಯೊಬ್ಬಳನ್ನು ಹೈದರಾಬಾದ್​ ಪೊಲೀಸರು ಬಂಧಿಸಿದ್ದಾರೆ.

young woman Held In Hyderabad
ಪೋಕ್ಸೋ ಕಾಯ್ದೆಯಡಿ ಯುವತಿ ಅರೆಸ್ಟ್

By ETV Bharat Karnataka Team

Published : Feb 23, 2024, 7:47 PM IST

ಹೈದರಾಬಾದ್ (ತೆಲಂಗಾಣ):ತನ್ನ ಪ್ರೀತಿಯ ಪ್ರಸ್ತಾಪವನ್ನು ತಿರಸ್ಕರಿಸಿದ್ದ ವಿವಾಹಿತ ಶಿಕ್ಷಕನ ಮೇಲೆ ಯುವತಿಯೊಬ್ಬಳು ದ್ವೇಷ ಸಾಧಿಸಿ ಜೈಲು ಸೇರಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಶಿಕ್ಷಕನ ಪತ್ನಿ ಮತ್ತು ಆತನ 11 ವರ್ಷದ ಪುತ್ರಿಯ ಮಾರ್ಫ್ ಮಾಡಿದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಮಾನಹಾನಿ ಮಾಡುವ ದುಷ್ಕೃತ್ಯಕ್ಕೆ ಮುಂದಾಗಿ ಈ ಆರೋಪಿ ಯುವತಿ ಕಂಬಿ ಎಣಿಸುವಂತಾಗಿದೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ 24 ವರ್ಷದ ಯುವತಿ ಗ್ರೂಪ್-1 ಹುದ್ದೆಗಳ ತರಬೇತಿಗಾಗಿ​ ಹೈದರಾಬಾದ್‌ಗೆ ಬಂದಿದ್ದಳು. ಇಲ್ಲಿನ ಕೋಚಿಂಗ್​ ಸಂಸ್ಥೆಗೆ ಸೇರಿದ್ದ ಈ ಯುವತಿ, ಇಲ್ಲಿನ ಶಿಕ್ಷಕರೊಬ್ಬರಿಗೆ ಮನಸೋತಿದ್ದಳು. ಅಂತೆಯೇ, ತನ್ನ ಪ್ರೇಮ ನಿವೇದನೆಯನ್ನು ಶಿಕ್ಷಕನ ಮುಂದೆ ಮಾಡಿಕೊಂಡಿದ್ದಳು. ಆಗ ಆ ಶಿಕ್ಷಕ ತನಗೆ ಈಗಾಗಲೇ ಮದುವೆಯಾಗಿದೆ. ಅಲ್ಲದೇ, ಮಕ್ಕಳು ಕೂಡ ಇದ್ದಾರೆ ಎಂದು ತಿಳಿಸಿ, ಯುವತಿಯ ಪ್ರೀತಿಯ ಪ್ರಸ್ತಾಪವನ್ನು ತಿರಸ್ಕರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ಕಾರಣಕ್ಕೆ ಶಿಕ್ಷಕನ ಮೇಲೆ ಯುವತಿ ದ್ವೇಷ ಸಾಧಿಸಿದ್ದಳು. ಶಿಕ್ಷಕನ ಪತ್ನಿ ಮತ್ತು ಆತನ ಮಗಳ ಫೋಟೋಗಳನ್ನು ಸಂಗ್ರಹಿಸಿದ್ದಳು. ನಂತರ ನಕಲಿ ಇನ್‌ಸ್ಟಾಗ್ರಾಮ್ ಖಾತೆ ಮತ್ತು ಯೂಟ್ಯೂಬ್ ಚಾನೆಲ್​ ಖಾತೆ ತೆರೆದಿದ್ದಳು. ಇದರಲ್ಲಿ ಶಿಕ್ಷಕನ ಪತ್ನಿ, ಪುತ್ರಿಯ ಮಾರ್ಫ್ ಮಾಡಿದ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಾಳೆ. ಅಷ್ಟೇ ಅಲ್ಲ, ಆ ಫೋಟೋಗಳನ್ನು ಕೋಚಿಂಗ್​ ಸಂಸ್ಥೆಯ ಅಧಿಕೃತ ಪುಟ ಹಾಗೂ ವಿದ್ಯಾರ್ಥಿಗಳ ವಾಟ್ಸ್​ಆ್ಯಪ್​ ಗ್ರೂಪ್‌ಗಳಲ್ಲಿ ಹಾಕುವ ಮೂಲಕ ಕಿರುಕುಳ ನೀಡಲಾರಂಭಿಸಿದ್ದಾಳೆ ಎಂದು ಪೊಲೀಸರು ವಿವರಿಸಿದ್ದಾರೆ.

ಇದರಿಂದ ನೊಂದು ಶಿಕ್ಷಕ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ನಗರದ ಸೈಬರ್ ಕ್ರೈಂ ಪೊಲೀಸರು, ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ಆರೋಪಿ ಯುವತಿಯನ್ನು ಗುರುವಾರ ಅನಂತಪುರದಲ್ಲಿ ಬಂಧಿಸಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ:ಭೀಕರ ಅಪಘಾತದಲ್ಲಿ ಯುವ ಶಾಸಕಿ ಲಾಸ್ಯ ನಂದಿತಾ ಸಾವು: ಸಿಎಂ, ಬಿಆರ್‌ಎಸ್ ನಾಯಕರು ಸೇರಿ ಹಲವರಿಂದ ಸಂತಾಪ

ABOUT THE AUTHOR

...view details