ನವದೆಹಲಿ: ಚುನಾವಣಾ ಆಯೋಗ ದೆಹಲಿ ರಾಜ್ಯದ ಚುನಾವಣೆಗೆ ಅಧಿಸೂಚನೆ ಹೊರಡಿಸಿಲ್ಲ. ಆದರೆ ಆಡಳಿತಾರೂಢ ಎಎಪಿ ಹಾಗೂ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಅಖಾಡಕ್ಕೆ ಇಳಿದಿದ್ದು, ಆಯಾಯ ಕ್ಷೇತ್ರಗಳಲ್ಲಿ ಚುನಾವಣೆ ಪ್ರಚಾರವನ್ನು ನಡೆಸುತ್ತಿವೆ. ಇದೀಗ ಬಿಜೆಪಿ ಸಹ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಅರವಿಂದ್ ಕೇಜ್ರಿವಾಲ್ ವಿರುದ್ಧ ಪರವೇಶ್ ವರ್ಮಾ ಕಣಕ್ಕೆ: ಈ ಮೂಲಕ ಎರಡೂ ಪಕ್ಷಗಳಂತೆ ಚುನಾವಣೆ ಘೋಷಣೆಗೆ ಮುನ್ನ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಎಪಿ ಮುಖ್ಯ ಸಂಚಾಲಕ ಹಾಗೂ ದೆಹಲಿ ಮಾಜಿ ಮುಖ್ಯಮಂತ್ರಿ ಅವರಿಂದ್ ಕೇಜ್ರಿವಾಲ್ ವಿರುದ್ಧ ಮಾಜಿ ಸಂಸದ ಪರವೇಶ್ ವರ್ಮಾ ಅವರನ್ನು ಚುನಾವಣಾ ಕಣಕ್ಕೆ ಇಳಿಸಿದೆ.
ಸಿಎಂ ಅತಿಶಿ ವಿರುದ್ಧ ರಮೇಶ್ ಬಿಂಧುರಿ ಅಖಾಡ ಪ್ರವೇಶ: ಇನ್ನು ಮುಖ್ಯಮಂತ್ರಿ ಅತಿಶಿ ವಿರುದ್ಧ ಕಲ್ಕಜಿ ಕ್ಷೇತ್ರದಿಂದ ಮಾಜಿ ಸಂಸದ ರಮೇಶ್ ಬಿಂಧುರಿಯನ್ನು ಬಿಜೆಪಿ ಕಣಕ್ಕೆ ಇಳಿಸಿದೆ. ಕರೊಲ್ ಭಾಗ್ ಕ್ಷೇತ್ರದಿಂದ ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳಾದ ದುಶ್ಯಂತ್ ಕುಮಾರ್ ಗೌತಮ್, ಜನಕಪುರಿಯಿಂದ ಅಶೀಶ್ ಸೂದ್ ಮತ್ತು ಗಾಂಧಿನಗರ್ನಿಂದ ಅರವಿಂದ್ ಸಿಂಗ್ ಲವ್ಲಿ ಕಣಕ್ಕೆ ಇಳಿಯಲಿದ್ದಾರೆ
29 ಸ್ಪರ್ಧಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿರುವ ಬಿಜೆಪಿ, ಎಎಪಿ ತೊರೆದು ಇತ್ತೀಚಿಗೆ ಕಮಲ ಪಾಳೆಯ ಸೇರಿದ್ದ ಕೈಲಾಶ್ ಗೆಹ್ಲೋಟ್ ಅವರನ್ನು ಬ್ರಿಜ್ವಸನ್ನಿಂದ ಕಣಕ್ಕೆ ಇಳಿಸಿದೆ.
ಮೊದಲ ಪಟ್ಟಿಯಲ್ಲಿ ಇಬ್ಬರು ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿದ ಬಿಜೆಪಿ: ಪಟ್ಟಿಯಲ್ಲಿ ಇಬ್ಬರು ಮಹಿಳೆಯರಿಗೂ ಟಿಕೆಟ್ ನೀಡಲಾಗಿದೆ. ದೆಹಲಿ ಬಿಜೆಪಿ ಮಾಜಿ ಅಧ್ಯಕ್ಷರಾದ ಸತೀಶ್ ಉಪಾಧ್ಯಾಯ ಮಲ್ವಿಯಾ ನಗರ್ನಿಂದ, ರಾಜ್ಕುಮಾರ್ ಭಾಟಿಯಾ ಆದರ್ಶನ ನಗರ್ನಿಂದ ಬಡ್ಲಿ ಯಿಂದ ದೀಪಕ್ ಚೌಧರಿ ಮತ್ತು ರೈಥಲದಿಂದ ಕುಲ್ವಂತ್ ರಾಣಾ ಕಣಕ್ಕೆ ಇಳಿಯಲಿದ್ದಾರೆ.
ಚುನಾವಣೆಗೆ ಈಗಾಗಲೇ ಸಿದ್ಧತೆ ನಡೆಸಿರುವ ಆಮ್ ಆದ್ಮಿ ಪಕ್ಷ (ಎಎಪಿ) ಎಲ್ಲ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಇನ್ನು ಕಾಂಗ್ರೆಸ್ ಕೂಡ ಕೆಲವು ನಾಯಕರ ಹೆಸರನ್ನು ಕೂಡ ಪ್ರಕಟಿಸಿದೆ.
ಇದೇ ಫೆಬ್ರವರಿಯಲ್ಲಿ ದೆಹಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಮೂರು ಪ್ರಮುಖ ರಾಷ್ಟ್ರೀಯ ಪಕ್ಷಗಳು ಚುನಾವಣೆ ಎದುರಿಸಲು ಸಿದ್ಧತೆ ನಡೆಸಿವೆ. ಚುನಾವಣಾ ದಿನಾಂಕ ಸೇರಿದಂತೆ ಪ್ರಕ್ರಿಯೆ ಕುರಿತು ಚುನಾವಣಾ ಆಯೋಗದಿಂದ ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ.
ಇದನ್ನೂ ಓದಿ: ಜಾತಿ ರಾಜಕೀಯ ಹೆಸರಲ್ಲಿ ಕೆಲವರಿಂದ ಶಾಂತಿ ಕದಡುವ ಯತ್ನ: ಪ್ರಧಾನಿ ಮೋದಿ