ಚಂಡೀಗಢ:ತಮ್ಮ 13 ಸಂಪುಟ ಸಹೋದ್ಯೋಗಿಗಳೊಂದಿಗೆ ಗುರುವಾರ ಹರಿಯಾಣದ ಮುಖ್ಯಮಂತ್ರಿಯಾಗಿ 2ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ ನಯಾಬ್ ಸಿಂಗ್ ಸೈನಿ, ಇಂದು ಸೆಕ್ರೆಟರಿಯೇಟ್ ಹಾಲ್ನಲ್ಲಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು.
''ನಾನು ರಾಜ್ಯದ ಮುಖ್ಯ ಸೇವಕನಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಹರಿಯಾಣದ 2.80 ಕೋಟಿ ಜನರಿಗಾಗಿ ದಣಿವರಿಯದೆ ಸೇವೆ ಸಲ್ಲಿಸುವ ಪ್ರತಿಜ್ಞೆ ಮಾಡಿರುವೆ. ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ರಾಜ್ಯದ ಜನರಿಗೆ ನಾನು ವಿನಮ್ರನಾಗಿದ್ದೇನೆ. ನನಗೆ ಪ್ರತಿಯೊಬ್ಬರ ಬೆಂಬಲ ಮತ್ತು ಸಂಕಲ್ಪ ಅತಿಮುಖ್ಯ. ಹರಿಯಾಣವನ್ನು ಅತ್ಯುತ್ತಮ, ಸಮೃದ್ಧ ಮತ್ತು ಸ್ವಾವಲಂಬಿ ರಾಜ್ಯವನ್ನಾಗಿ ಮಾಡಲು ನಾವು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಪೂರ್ಣ ಬಹುಮತದೊಂದಿಗೆ ನಮ್ಮ ಈ ಸರ್ಕಾರ ಉತ್ತಮ ಆಡಳಿತ ನೀಡಲಿದೆ. ಸಮಾನತೆ, ಸಮೃದ್ಧಿ ಮತ್ತು ಬಡವರ ಕಲ್ಯಾಣಕ್ಕಾಗಿ ಸರ್ಕಾರ ಯಾವಾಗಲೂ ಸಮರ್ಪಿತ'' ಎಂದು ನಯಾಬ್ ಸಿಂಗ್ ಸೈನಿ ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳುವುದಕ್ಕೂ ಮುನ್ನ ತಮ್ಮ 'ಎಕ್ಸ್' ಖಾತೆಯಲ್ಲಿ ಬರೆದಿದ್ದಾರೆ.
ಅಧಿಕಾರ ವಹಿಸಿಕೊಂಡ ಬಳಿಕ ಕ್ಯಾಬಿನೆಟ್ ಬ್ರೀಫಿಂಗ್ ಉದ್ದೇಶಿಸಿ ಮಾತನಾಡಿದ ನೂತನ ಸಿಎಂ, ''ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ದೀರ್ಘಕಾಲದ ಕಿಡ್ನಿ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೆವು. ಅದಕ್ಕೆ ಸಂಬಂಧಿಸಿದ ಕಡತಕ್ಕೆ ಸಹಿ ಹಾಕಿದ್ದೇನೆ. ಕಿಡ್ನಿ ಡಯಾಲಿಸಿಸ್ ವೆಚ್ಚವನ್ನು ಹರಿಯಾಣ ಸರ್ಕಾರ ಭರಿಸಲಿದೆ. ಡಯಾಲಿಸಿಸ್ ಸೇವೆಯನ್ನು ಮುಂದಿನ ದಿನಗಳಲ್ಲಿ ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿಯೂ ಒದಗಿಸಲಾಗುವುದು. ಮೂರನೇ ಬಾರಿಗೆ ಬಾರಿ ಜನಾದೇಶ ನೀಡಿ ಪ್ರಧಾನಿ ಮೋದಿಯವರ ನೀತಿಗಳನ್ನು ಅನುಮೋದಿಸಿದ್ದಕ್ಕಾಗಿ ಹರಿಯಾಣದ ಜನರಿಗೆ ನಾನು ಧನ್ಯವಾದ ಹೇಳುತ್ತೇನೆ. ಆಡಳಿತ ವಿರೋಧಿ ನೀತಿಯನ್ನು ಧಿಕ್ಕರಿಸಿ, ರಾಜ್ಯದ ಜನ ನಮಗೆ ಸಂಪೂರ್ಣ ಬಹುಮತ ನೀಡಿದ್ದಾರೆ. ರೈತರನ್ನು ಪ್ರಚೋದಿಸುವುದು ಸೇರಿದಂತೆ ಯುವಕರು, ಕ್ರೀಡಾಪಟುಗಳನ್ನು ದಾರಿ ತಪ್ಪಿಸುವಂತಹ ಅನೇಕ ಕೆಲಸ ನಡೆದಿದೆ. ಆದರೆ, ರಾಜ್ಯದ ಜನ ಪ್ರಧಾನಿ ಮೋದಿಯವರ ದೂರದೃಷ್ಟಿ ಆಡಳಿತಕ್ಕೆ ಬೆಲೆ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್ನ ಭರವಸೆಗಳನ್ನು ಧಿಕ್ಕರಿಸಿದ್ದಾರೆ'' ಎಂದರು.
"ನಮ್ಮ ಸರ್ಕಾರ ಮಹಿಳಾ ಶಕ್ತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ. ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವವರು ರಾಜ್ಯವನ್ನು ತೊರೆಯಿರಿ ಅಥವಾ ಸುಧಾರಿಸಿಕೊಳ್ಳಿ, ಇಲ್ಲದಿದ್ದರೆ ನಾವು ಸುಧಾರಿಸುತ್ತೇವೆ" ಎಂದು ಸಿಎಂ ಸೈನಿ ಇದೇ ವೇಳೆ ಎಚ್ಚರಿಕೆ ನೀಡಿದರು.
ಇದನ್ನೂ ಓದಿ:ಹರಿಯಾಣ ಸಿಎಂ ಆಗಿ 2ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ ನಯಾಬ್ ಸಿಂಗ್ ಸೈನಿ