ನವದೆಹಲಿ:ದೆಹಲಿ ವಿಧಾನಸಭೆ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸವಾಲು ಹಾಕಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಉಚಿತ ವಿದ್ಯುತ್ ನೀಡಿದಲ್ಲಿ ಕೇಸರಿ ಪಡೆಯ ಪರವಾಗಿಯೇ ಚುನಾವಣಾ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ.
ಆಪ್ ಪಕ್ಷದಿಂದ ಭಾನುವಾರ ಹಮ್ಮಿಕೊಂಡಿದ್ದ ಜನತಾ ಕಿ ಅದಾಲತ್ನಲ್ಲಿ ಮಾತನಾಡಿದ ಕೇಜ್ರಿವಾಲ್, ಬಿಜೆಪಿಯ ಡಬಲ್ ಇಂಜಿನ್ ಸರ್ಕಾರಗಳು ವಿಫಲವಾಗಿವೆ. ಹರಿಯಾಣ ಮತ್ತು ಜಮ್ಮು-ಕಾಶ್ಮೀರದಲ್ಲಿ ಸೋಲಾಗಲಿದೆ. ನವೆಂಬರ್‌ನಲ್ಲಿ ಜಾರ್ಖಂಡ್ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅವುಗಳ ಜೊತೆಗೆ ದೆಹಲಿ ವಿಧಾನಸಭಾ ಚುನಾವಣೆಯನ್ನೂ ನಡೆಸಿ. ಇದಕ್ಕೆ ಎಎಪಿ ಸಿದ್ಧವಾಗಿದೆ ಎಂದು ಹೇಳಿದರು.
22 ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಹಣದುಬ್ಬರ, ಭ್ರಷ್ಟಾಚಾರ ಮತ್ತು ನಿರುದ್ಯೋಗ ಆ ರಾಜ್ಯಗಳಲ್ಲಿ ಹೆಚ್ಚಾಗಿದೆ. ಶೀಘ್ರದಲ್ಲೇ ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲೂ ಡಬಲ್ ಎಂಜಿನ್ ಪತನವಾಗಲಿದೆ. ಇದಕ್ಕೆ ಇಂಬು ನೀಡುವಂತೆ ಎಕ್ಸಿಟ್ ಪೋಲ್ ಸಮೀಕ್ಷೆಗಳು ಬಂದಿವೆ ಎಂದರು.
ಆರು ಉಚಿತಗಳ ಸಿಹಿ ಹಂಚಿಕೆ:ಭಾಷಣದ ವೇಳೆ ಕೇಜ್ರಿವಾಲ್ ಅವರು ಆರು ಸಿಹಿ ತಿಂಡಿಗಳ ಪೊಟ್ಟಣ ಹಿಡಿದುಕೊಂಡಿದ್ದರು. ಪ್ರತಿ ಸಿಹಿಯೂ ದಿಲ್ಲಿ ಸರ್ಕಾರ ಜಾರಿ ಮಾಡಿದ ಆರು ಉಚಿತ ಯೋಜನೆಗಳನ್ನು ಸಂಕೇತಿಸುತ್ತದೆ. ಉಚಿತ ವಿದ್ಯುತ್, ನೀರು, ಮಹಿಳೆಯರಿಗೆ ಬಸ್ ಪ್ರಯಾಣ, ವೃದ್ಧರಿಗೆ ತೀರ್ಥಯಾತ್ರೆ, ಆರೋಗ್ಯ ಮತ್ತು ಶಿಕ್ಷಣವನ್ನು ಸರ್ಕಾರ ಉಚಿತವಾಗಿ ನೀಡುತ್ತಿದೆ ಎಂದು ಕೇಜ್ರಿವಾಲ್ ಹೇಳಿದರು.