ಕರ್ನಾಟಕ

karnataka

ETV Bharat / bharat

ಪ್ರತಿಭಟನೆ ದಾಖಲಿಸಲು ನೀತಿ ಆಯೋಗದ ಸಭೆಗೆ ಹಾಜರಾಗುವೆ: ಸಿಎಂ ಮಮತಾ ಬ್ಯಾನರ್ಜಿ - NITI Aayog Meet - NITI AAYOG MEET

ರಾಜ್ಯ ಸರ್ಕಾರದ ವಿರುದ್ಧ ಕೇಂದ್ರದ ತಾರತಮ್ಯವನ್ನು ಪ್ರತಿಭಟಿಸಲು ತಾವು ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸುವುದಾಗಿ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಸಿಎಂ ಮಮತಾ ಬ್ಯಾನರ್ಜಿ
ಸಿಎಂ ಮಮತಾ ಬ್ಯಾನರ್ಜಿ (IANS)

By PTI

Published : Jul 26, 2024, 2:19 PM IST

ಕೋಲ್ಕತಾ: ದೆಹಲಿಯಲ್ಲಿ ಜುಲೈ 27ರಂದು ನಡೆಯಲಿರುವ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ದೃಢಪಡಿಸಿದ್ದಾರೆ. ಐಎನ್​ಡಿಐಎ ಮೈತ್ರಿಕೂಟ ಪಕ್ಷಗಳ ಆಡಳಿತವಿರುವ ಹಲವಾರು ರಾಜ್ಯಗಳ ಮುಖ್ಯಮಂತ್ರಿಗಳು ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ. ಸದ್ಯ ಈ ಬಗೆಗಿನ ಅನಿಶ್ಚಿತತೆಗೆ ತೆರೆ ಎಳೆದಿರುವ ಸಿಎಂ ಮಮತಾ ಸಭೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ.

ದೆಹಲಿಗೆ ತೆರಳುವ ಮುನ್ನ ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಯಾನರ್ಜಿ, ಕೇಂದ್ರ ಸರ್ಕಾರದ ತಾರತಮ್ಯದ ಬಜೆಟ್ ಮತ್ತು ಬಂಗಾಳ ಹಾಗೂ ಇತರ ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳನ್ನು ವಿಭಜಿಸುವ ಪಿತೂರಿಯ ವಿರುದ್ಧ ಸಭೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭಟನೆಯನ್ನು ದಾಖಲಿಸುವುದಾಗಿ ಹೇಳಿದರು.

"ನೀತಿ ಆಯೋಗದ ಸಭೆ ನಡೆಯುವ ಏಳು ದಿನಗಳ ಮೊದಲೇ ಲಿಖಿತ ಭಾಷಣ ಕಳುಹಿಸುವಂತೆ ನನಗೆ ಕೇಳಲಾಗಿತ್ತು. ನಾನು ಭಾಷಣ ಕಳುಹಿಸಿದ್ದೇನೆ. ಆದರೆ ಕೇಂದ್ರ ಬಜೆಟ್​ ಮಂಡನೆಗೂ ಮುನ್ನ ನಾನು ಭಾಷಣ ಕಳುಹಿಸಿದ್ದೆ" ಎಂದರು.

"ಸಭೆಯಲ್ಲಿ ಭಾಷಣ ಮಾಡಲು ಮತ್ತು ಬಂಗಾಳ ಹಾಗೂ ಅದರ ನೆರೆಯ ರಾಜ್ಯಗಳನ್ನು ವಿಭಜಿಸಲು ರೂಪಿಸಲಾಗುತ್ತಿರುವ ಪಿತೂರಿಯ ಜೊತೆಗೆ ಪ್ರತಿಪಕ್ಷ ಆಡಳಿತದ ರಾಜ್ಯಗಳ ವಿರುದ್ಧದ ತಾರತಮ್ಯ ಮತ್ತು ರಾಜಕೀಯ ಪಕ್ಷಪಾತದ ವಿರುದ್ಧ ಪ್ರತಿಭಟನೆಯನ್ನು ದಾಖಲಿಸಲು ಅವಕಾಶ ಸಿಕ್ಕರೆ ಖಂಡಿತವಾಗಿಯೂ ಹಾಗೆ ಮಾಡಲಿದ್ದೇನೆ. ಇಲ್ಲವಾದರೆ ಸಭೆ ಬಹಿಷ್ಕರಿಸಿ ಹೊರಬರುತ್ತೇನೆ" ಎಂದು ಸಿಎಂ ಮಮತಾ ತಿಳಿಸಿದರು.

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವಾರು ನಾಯಕರು ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸುತ್ತಿಲ್ಲ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಸಭೆಗೆ ಗೈರು ಹಾಜರಾಗುವ ನಿರೀಕ್ಷೆಯಿದೆ. ಪುದುಚೇರಿ ಮುಖ್ಯಮಂತ್ರಿ ಎನ್ ರಂಗಸಾಮಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ.

ನಾಳೆ ನೀತಿ ಆಯೋಗದ ಸಭೆ: ಕೇಂದ್ರ ಬಜೆಟ್​ನಲ್ಲಿ ರಾಜ್ಯದ ಬೇಡಿಕೆಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿರುವ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಲು ತಮ್ಮ ಸರ್ಕಾರ ನಿರ್ಧರಿಸಿದೆ ಎಂದು ಮಂಗಳವಾರ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ ಒಂಬತ್ತನೇ ಆಡಳಿತ ಮಂಡಳಿ ಸಭೆ ಶನಿವಾರ ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿದೆ.

ಇದನ್ನೂ ಓದಿ: 'ಸಂವಿಧಾನ ಹತ್ಯೆ ದಿನ' ಪ್ರಶ್ನಿಸಿದ್ದ ಪಿಐಎಲ್​ ವಜಾಗೊಳಿಸಿದ ದೆಹಲಿ ಹೈಕೋರ್ಟ್ - Samvidhan Hatya Diwas

ABOUT THE AUTHOR

...view details