ಅಮರಾವತಿ, ಆಂಧ್ರಪ್ರದೇಶ: ಚಿತ್ರನಟ ಹಾಗೂ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಲು ಸಿದ್ದ ಇರುವುದಾಗಿ ಪರೋಕ್ಷವಾಗಿ ಹೇಳಿದ್ದಾರೆ. ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪವನ್ ಕಲ್ಯಾಣ್ ದೆಹಲಿ ಮಾಧ್ಯಮಗಳಿಗೆ ಈ ಸುಳಿವು ನೀಡಿದ್ದಾರೆ.
ಆಂಧ್ರಪ್ರದೇಶದಲ್ಲಿ ಎನ್ ಡಿಎ ಮೈತ್ರಿಕೂಟದ ಗೆಲುವಿನಲ್ಲಿ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷ ಪ್ರಮುಖ ಪಾತ್ರ ವಹಿಸಿದೆ. ಜನಸೇನಾ ಪಕ್ಷದಿಂದ ಸ್ಪರ್ಧಿಸಿದ್ದ ಎಲ್ಲಾ 21 ವಿಧಾನಸಭೆ ಮತ್ತು ಎರಡು ಲೋಕಸಭೆ ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳು ವಿಜಯ ಸಾಧಿಸಿದ್ದಾರೆ. ಈ ನಡುವೆ ನಾಲ್ಕನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ಚಂದ್ರಬಾಬು ನಾಯ್ಡು ಸಜ್ಜಾಗಿದ್ದಾರೆ. ಎರಡು ಬಾರಿ ಸಮಗ್ರ ಆಂಧ್ರಪ್ರದೇಶ ಸಿಎಂ ಹಾಗೂ ಒಂದು ಬಾರಿ ವಿಭಜಿತ ಆಂಧ್ರಪ್ರದೇಶದ ಸಿಎಂ ಆಗಿ ಸೇವೆ ಸಲ್ಲಿಸಿದ್ದಾರೆ. ಇದೇ ತಿಂಗಳ 12 ರಂದು ನಾಲ್ಕನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ, ಜನಸೇನೆಯನ್ನು ತಮ್ಮ ಕ್ಯಾಬಿನೆಟ್‌ಗೆ ಸೇರ್ಪಡೆಗೊಳಿಸುವ ಕುರಿತು ಯಾವುದೇ ಘೋಷಣೆ ಮಾಡಿಲ್ಲ.