ಕರ್ನಾಟಕ

karnataka

ETV Bharat / bharat

ಶಿಂಧೆ ಅಥವಾ ಫಡ್ನವೀಸ್? ಮಹಾರಾಷ್ಟ್ರದ ಮುಂದಿನ ಸಿಎಂ ಯಾರು? - ASSEMBLY ELECTION 2024

ಮಹಾರಾಷ್ಟ್ರದಲ್ಲಿ ಮುಂದಿನ ಸಿಎಂ ಯಾರಾಗಲಿದ್ದಾರೆ ಎಂಬ ಚರ್ಚೆಗಳು ಜೋರಾಗಿವೆ.

Eknath Shinde
Eknath Shinde (IANS)

By ETV Bharat Karnataka Team

Published : Nov 23, 2024, 2:13 PM IST

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಮತ ಎಣಿಕೆಯು ಎನ್​​ಡಿಎ ದ ಮಹಾಯುತಿಗೆ ದೊಡ್ಡ ಜನಾದೇಶ ಸಿಗಲಿರುವುದು ಸ್ಪಷ್ಟವಾಗುತ್ತಿದ್ದಂತೆ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲ ಈಗ ಗರಿಗೆದರಿದೆ. ಮೈತ್ರಿಕೂಟದಲ್ಲಿ ಅತಿದೊಡ್ಡ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಸಿಗಬೇಕೆಂಬ ಬಿಜೆಪಿಯ ನಿಲುವಿನ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಏಕನಾಥ್ ಶಿಂದೆ, "ಅಂತಿಮ ಫಲಿತಾಂಶಗಳು ಬರಲಿ... ನಾವು ಒಟ್ಟಾಗಿ ಚುನಾವಣೆ ಎದುರಿಸಿದಂತೆಯೇ, ಮೂರೂ ಪಕ್ಷಗಳು ಒಟ್ಟಿಗೆ ಕುಳಿತು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ" ಎಂದು ಹೇಳಿದರು.

ಏಕನಾಥ್ ಶಿಂಧೆ ಅವರಿಗೆ ಇವತ್ತಿನ ದಿನ ಬಹಳಷ್ಟು ಸಮಯದವರೆಗೆ ನೆನಪಿನಲ್ಲಿಟ್ಟುಕೊಳ್ಳುವಂಥದ್ದಾಗಿದೆ. ಶಿವಸೇನೆಯನ್ನು ವಿಭಜಿಸಿ ಬಿಜೆಪಿಯೊಂದಿಗೆ ಕೈಜೋಡಿಸಿ ಮುಖ್ಯಮಂತ್ರಿಯಾದ ಮೂರು ವರ್ಷಗಳ ನಂತರ, ಅವರು ತಮ್ಮ ಮಾಜಿ ನಾಯಕ ಉದ್ಧವ್ ಠಾಕ್ರೆ ನೇತೃತ್ವದ ಬಣದ ವಿರುದ್ಧ ಸಮಗ್ರ ವಿಜಯ ಸಾಧಿಸಿದ್ದಾರೆ.

ಠಾಕ್ರೆ ಅವರ ಶಿವಸೇನೆ (ಯುಬಿಟಿ) 18 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ, ಶಿಂಧೆ ಸೇನಾ 56 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕೆಲವೇ ತಿಂಗಳುಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಅದು ಗೆದ್ದಿದ್ದ 7 ಸ್ಥಾನಗಳಿಗಿಂತ ಇದು ಗಮನಾರ್ಹ ಸುಧಾರಣೆಯಾಗಿದೆ. ಈ ಗೆಲುವು ಸೇನಾ ಮತ್ತು ಸೇನಾ ಅಸ್ಮಿತೆಯ ಹೋರಾಟದಲ್ಲಿ ಶಿಂಧೆ ಬಣಕ್ಕೆ ಸ್ಪಷ್ಟ ಮುನ್ನಡೆಯಾಗಿದೆ.

ಆದರೆ ಶಿಂಧೆ ಅವರು ಮುಖ್ಯಮಂತ್ರಿ ಹುದ್ದೆಯನ್ನು ಉಳಿಸಿಕೊಳ್ಳುತ್ತಾರೆಯೇ ಎಂಬುದು ಈಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಅವರ ಮಿತ್ರ ಪಕ್ಷ ಬಿಜೆಪಿ ತಾನು ಸ್ಪರ್ಧಿಸಿದ 148 ಸ್ಥಾನಗಳ ಪೈಕಿ 127 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಹೀಗಾಗಿ ದೇವೇಂದ್ರ ಫಡ್ನವೀಸ್ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ರಾಜ್ಯ ಬಿಜೆಪಿಯ ಅತ್ಯಂತ ಎತ್ತರದ ನಾಯಕರಾಗಿರುವ ಫಡ್ನವೀಸ್ ಪ್ರಸ್ತುತ ಉಪಮುಖ್ಯಮಂತ್ರಿಯಾಗಿದ್ದಾರೆ. ಉದ್ಧವ್ ಠಾಕ್ರೆ ಸರ್ಕಾರವನ್ನು ಉರುಳಿಸಲು ಕಾರಣವಾದ ಸೇನಾ ಬಂಡಾಯದ ನೇತೃತ್ವವನ್ನು ಶಿಂಧೆ ವಹಿಸಿದಾಗ, ಫಡ್ನವೀಸ್ ಉಪಮುಖ್ಯಮಂತ್ರಿ ಸ್ಥಾನಕ್ಕೆ ಒಪ್ಪಿಕೊಂಡಿದ್ದರು. ಆದರೆ ಬಿಜೆಪಿ ಈ ಬಾರಿ ಇಷ್ಟು ದೊಡ್ಡ ಜನಾದೇಶವನ್ನು ಗೆದ್ದಿರುವುದರಿಂದ, ಅದು ಈ ಬಾರಿ ಹಿಂದಿನಷ್ಟೇ ಉದಾರವಾಗಿರುತ್ತದೆ ಎಂದು ಹೇಳಲಾಗದು.

ಸದ್ಯದ ಪರಿಸ್ಥಿತಿಯಲ್ಲಿ ಶಿಂಧೆ ಅವರ ಬಳಿ ಚೌಕಾಸಿ ಮಾಡಬಹುದಾದಂಥ ಯಾವುದೇ ಅಸ್ತ್ರಗಳಿಲ್ಲ. ಮಹಾಯುತಿಯ ಮತ್ತೊಂದು ಮಿತ್ರ ಪಕ್ಷವಾದ ಅಜಿತ್ ಪವಾರ್ ಅವರ ಎನ್​ಸಿಪಿ ಕೂಡ ಉತ್ತಮ ಪ್ರದರ್ಶನ ನೀಡಿದೆ. ಅಧಿಕಾರ ಉಳಿಸಿಕೊಳ್ಳಲು ಬಿಜೆಪಿಗೆ ತನ್ನ ಎರಡು ಮಿತ್ರಪಕ್ಷಗಳಲ್ಲಿ ಕೇವಲ ಒಂದು ಸಾಕು. ಇದರರ್ಥ ಸಚಿವ ಸ್ಥಾನಗಳ ಬಗ್ಗೆ ಚೌಕಾಸಿ ನಡೆಸಬಹುದಾದರೂ ಮುಖ್ಯಮಂತ್ರಿ ಸ್ಥಾನ ತನಗೇ ಬೇಕು ಎಂದು ಒತ್ತಾಯಿಸುವ ಸ್ಥಿತಿಯಲ್ಲಿ ಈಗ ಶಿಂಧೆ ಇಲ್ಲ. ಒಟ್ಟಾರೆಯಾಗಿ, 288 ಸದಸ್ಯರ ವಿಧಾನಸಭೆಯಲ್ಲಿ ಎನ್ ಡಿಎ 225 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಪ್ರತಿಪಕ್ಷಗಳ ಮಹಾ ವಿಕಾಸ್ ಅಘಾಡಿ 55 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಇದನ್ನೂ ಓದಿ : ಚುನಾವಣಾ ಫಲಿತಾಂಶ ತಿರುಚಲಾಗಿದೆ, ಒಪ್ಪಲು ಸಾಧ್ಯವೇ ಇಲ್ಲ: ಸಂಜಯ ರಾವತ್

ABOUT THE AUTHOR

...view details