ಕರ್ನಾಟಕ

karnataka

ETV Bharat / bharat

'ನಾವು ಭಾರತವನ್ನು ಜಾಗತಿಕ ರಫ್ತು ಕೇಂದ್ರವಾಗಿ ಪರಿವರ್ತಿಸುತ್ತೇವೆ': ಭಾರತ್ ಟೆಕ್ಸ್ 2024ನಲ್ಲಿ ಪ್ರಧಾನಿ ಮೋದಿ - ಜವಳಿ ಕ್ಷೇತ್ರ

ಇಂದು ದೆಹಲಿಯಲ್ಲಿ ಭಾರತ್ ಟೆಕ್ಸ್ 2024 ಉದ್ಘಾಟಿಸಿದ ಪ್ರಧಾನಿ ಮೋದಿ, ಜವಳಿ ಕ್ಷೇತ್ರಕ್ಕೆ ಎಲ್ಲ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

PM Modi
ಪ್ರಧಾನಿ ಮೋದಿ

By ETV Bharat Karnataka Team

Published : Feb 26, 2024, 4:24 PM IST

ನವದೆಹಲಿ: 2047ಕ್ಕೆ ಭಾರತ ಸ್ವಾತಂತ್ರ್ಯ ಪಡೆದು ನೂರು ವರ್ಷಗಳನ್ನು ಪೂರೈಸುವ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವಲ್ಲಿ ಜವಳಿ ಕ್ಷೇತ್ರ ನಿರ್ಣಾಯಕ ಪಾತ್ರ ವಹಿಸಲಿದೆ. ಈ ನಿಟ್ಟಿನಲ್ಲಿ ಜವಳಿ ಕ್ಷೇತ್ರಕ್ಕೆ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು. ದೆಹಲಿಯ ಭಾರತ್ ಮಂಟಪದಲ್ಲಿ ಇಂದು 'ಭಾರತ್ ಟೆಕ್ಸ್ 2024' ಉದ್ಘಾಟಿಸಿ ಅವರು ಮಾತನಾಡಿದರು.

"ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವಲ್ಲಿ ಜವಳಿ ಕ್ಷೇತ್ರದ ಕೊಡುಗೆಯನ್ನು ಇನ್ನಷ್ಟು ಹೆಚ್ಚಿಸಲು ಸರ್ಕಾರ ವಿಶಾಲ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದೆ. ಮುಂದಿನ 25 ವರ್ಷಗಳಲ್ಲಿ ದೇಶವನ್ನು 'ವಿಕ್ಷಿತ್ ರಾಷ್ಟ್ರ'ವನ್ನಾಗಿ ಪರಿವರ್ತಿಸಲು ನಾವು ಸಂಕಲ್ಪ ಮಾಡಿದ್ದೇವೆ. ವಿಕ್ಷಿತ್ ಭಾರತದ ನಾಲ್ಕು ಪ್ರಮುಖ ಆಧಾರ ಸ್ತಂಭಗಳೆಂದರೆ ಬಡವರು, ಯುವಕರು, ರೈತರು ಮತ್ತು ಮಹಿಳೆಯರು. ಜವಳಿ ಕ್ಷೇತ್ರ ಈ ಎಲ್ಲಾ ಕಂಬಗಳೊಂದಿಗೆ ಸಂಪರ್ಕ ಹೊಂದಿದೆ. ಭಾರತ್ ಟೆಕ್ಸ್‌ನಂತಹ ಕಾರ್ಯಕ್ರಮವು ನಮಗೆಲ್ಲರಿಗೂ ಬಹಳ ಮುಖ್ಯವಾಗುತ್ತದೆ" ಎಂದು ಮೋದಿ ಹೇಳಿದರು.

"ದೇಶವನ್ನು 'ಗ್ಲೋಬಲ್ ಎಕ್ಸ್‌ಪೋರ್ಟ್ ಹಬ್' ಆಗಿ ಪರಿವರ್ತಿಸುತ್ತೇವೆ ಎಂಬ ದೃಢ ನಂಬಿಕೆ ನಮಗಿದೆ. ಕಳೆದ ದಶಕದಲ್ಲಿ ವೋಕಲ್‌ ಫಾರ್​ ಲೋಕಲ್​ ಎಂಬ ಹೊಸ ಆಯಾಮವನ್ನು ಇದಕ್ಕಾಗಿ ಸೇರಿಸಿದ್ದೇವೆ. ಇಂದು ಇಡೀ ದೇಶದಲ್ಲಿ ವೋಕಲ್​ ಫಾರ್​ ಲೋಕಲ್​ ಹಾಗೂ ಲೋಕಲ್​ ಟು ಗ್ಲೋಬಲ್​ ಚಳುವಳಿ ನಡೆಯುತ್ತಿವೆ" ಎಂದರು.

"ಸರ್ಕಾರದ ಸತತ ಪ್ರಯತ್ನಗಳು ಜವಳಿ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆ ಹೆಚ್ಚಿಸುತ್ತಿವೆ. ಈ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) 2014ಕ್ಕಿಂತ ಮೊದಲು ಇರುವುದಕ್ಕಿಂತ ದ್ವಿಗುಣಗೊಂಡಿದೆ" ಎಂದು ಜವಳಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಸರ್ಕಾರದ ಪ್ರಯತ್ನಗಳನ್ನು ಮೋದಿ ವಿವರಿಸಿದರು.

"ಜವಳಿ ಕ್ಷೇತ್ರದ ಮೇಲೆ ಸ್ಥಿರ ಮತ್ತು ದೂರದೃಷ್ಟಿಯ ಸರ್ಕಾರದ ಪ್ರಯತ್ನಗಳ ಪರಿಣಾಮ ಚೆನ್ನಾಗಿ ಗೋಚರಿಸುತ್ತಿವೆ. 2014ರಲ್ಲಿ, ದೇಶದ ಜವಳಿ ಮಾರುಕಟ್ಟೆಯ ಮೌಲ್ಯ 7 ಲಕ್ಷ ಕೋಟಿ ರೂಪಾಯಿಗಳಿಗಿಂತ ಕಡಿಮೆಯಿತ್ತು. ಇಂದು 12 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ಕಳೆದ 10 ವರ್ಷಗಳಲ್ಲಿ, ನೂಲು, ಬಟ್ಟೆ ಮತ್ತು ಉಡುಪುಗಳ ಉತ್ಪಾದನೆಯಲ್ಲಿ ಶೇಕಡಾ 25ರಷ್ಟು ಏರಿಕೆಯಾಗಿದೆ. ಸರಕಾರವು ಜವಳಿ ಕ್ಷೇತ್ರದಲ್ಲಿ ಗುಣಮಟ್ಟ ನಿಯಂತ್ರಣಕ್ಕೆ ಹೆಚ್ಚು ಗಮನಹರಿಸಿದೆ. ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ನಿಮ್ಮನ್ನು ಬೆಂಬಲಿಸಲು ನಮ್ಮ ಸರ್ಕಾರವು ಸಂಪೂರ್ಣವಾಗಿ ಬದ್ಧ" ಎಂದು ತಿಳಿಸಿದರು.

ಪ್ರತಿ 10 ಉಡುಪು ತಯಾರಕರಲ್ಲಿ 7 ಮಹಿಳೆಯರು ಮತ್ತು ಕೈಮಗ್ಗದಲ್ಲಿ ಇನ್ನೂ ಹೆಚ್ಚು ಮಹಿಳೆಯರು ತೊಡಗಿಸಿಕೊಂಡಿದ್ದಾರೆ. ಜವಳಿ ಹೊರತುಪಡಿಸಿ ಖಾದಿ ದೇಶದ ಮಹಿಳೆಯರಿಗೆ ಹೊಸ ಶಕ್ತಿ ನೀಡಿದೆ. ಕಳೆದ ಹತ್ತು ವರ್ಷಗಳಲ್ಲಿ ನಾವು ಮಾಡಿದ ಯಾವುದೇ ಪ್ರಯತ್ನಗಳು ಖಾದಿಯನ್ನು ಅಭಿವೃದ್ಧಿ ಮತ್ತು ಉದ್ಯೋಗ ಎರಡರ ಸಾಧನವನ್ನಾಗಿಸಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಯ (ಎನ್‌ಐಎಫ್‌ಟಿ) ನೆಟ್‌ವರ್ಕ್ ದೇಶದ 19 ಸಂಸ್ಥೆಗಳನ್ನು ತಲುಪಿದೆ" ಎಂದು ಹೇಳಿದರು.

ABOUT THE AUTHOR

...view details