ನವದೆಹಲಿ: ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಂಗ್ರೆಸ್ ಗುರುವಾರ ಸ್ವಾಗತಿಸಿದೆ. ಸುಪ್ರೀಂ ಕೋರ್ಟ್ ತೀರ್ಪು ನೋಟುಗಳ ಬದಲು ವೋಟುಗಳಿಗೆ ಬಲ ತರಲಿದೆ ಎಂದು ಅದು ಹೇಳಿದೆ. ಈ ಕುರಿತು 'ಎಕ್ಸ್'ನಲ್ಲಿ ತಮ್ಮ ಪ್ರತಿಕ್ರಿಯೆ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಮೋದಿ ಸರ್ಕಾರದ ಚುನಾವಣಾ ಬಾಂಡ್ ಯೋಜನೆಯು ಸಂಸತ್ತು ಅಂಗೀಕರಿಸಿದ ಕಾನೂನುಗಳು ಮತ್ತು ಭಾರತದ ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದಿದ್ದಾರೆ. ತುಂಬಾ ದಿನಗಳಿಂದ ಕಾಯಲಾಗುತ್ತಿದ್ದ ತೀರ್ಪು ಕೊನೆಗೂ ಬಂದಿರುವುದು ಸಂತಸಕರ ಹಾಗೂ ಈ ತೀರ್ಪು ನೋಟುಗಳ ಬದಲು ವೋಟುಗಳಿಗೆ ಬಲ ನೀಡಲಿದೆ ಎಂದು ಅವರು ಹೇಳಿದ್ದಾರೆ.
ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅನ್ನದಾತರ ಮೇಲೆ ಅನ್ಯಾಯದ ಮೇಲೆ ಅನ್ಯಾಯಗಳನ್ನು ಮಾಡುತ್ತಿದೆ ಮತ್ತು ತನಗೆ ದೇಣಿಗೆ ನೀಡುವವರಿಗೆ ಮಾತ್ರ ಎಲ್ಲ ಸವಲತ್ತು ನೀಡುತ್ತಿದೆ ಎಂದು ರಮೇಶ್ ಆರೋಪಿಸಿದರು. ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪ್ಯಾಟ್) ವಿಷಯದ ಬಗ್ಗೆ ರಾಜಕೀಯ ಪಕ್ಷಗಳನ್ನು ಭೇಟಿ ಮಾಡಲು ಸಹ ಚುನಾವಣಾ ಆಯೋಗವು ನಿರಂತರವಾಗಿ ನಿರಾಕರಿಸುತ್ತಿದೆ ಎಂಬುದನ್ನು ಸುಪ್ರೀಂ ಕೋರ್ಟ್ ಗಮನಿಸುತ್ತದೆ ಎಂದು ನಾವು ಭಾವಿಸುತ್ತೇವೆ. ಮತದಾನ ಪ್ರಕ್ರಿಯೆಯಲ್ಲಿ ಎಲ್ಲವೂ ಪಾರದರ್ಶಕವಾಗಿದ್ದರೆ ಈ ಹಠಮಾರಿತನ ಏಕೆ ಎಂದು ಅವರು ಪ್ರಶ್ನಿಸಿದರು.
ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ, ಚುನಾವಣಾ ಬಾಂಡ್ಗಳ ರೂಪದಲ್ಲಿ ಪಡೆದ 5,200 ಕೋಟಿ ರೂ.ಗೆ ಬದಲಾಗಿ ಬಿಜೆಪಿ ಏನನ್ನು ಮಾರಾಟ ಮಾಡಿದೆ ಎಂದು ನಾವು ತಿಳಿಯಲು ಬಯಸುತ್ತೇವೆ ಎಂದರು.