ಜಮ್ಮು (ಜಮ್ಮು ಮತ್ತು ಕಾಶ್ಮೀರ):ಜಮ್ಮು ಪ್ರದೇಶದ ಗ್ರಾಮ ರಕ್ಷಣಾ ಸಿಬ್ಬಂದಿಗೆ ಹಳೆಯ ಶಸ್ತ್ರಾಸ್ತ್ರಗಳ ಬದಲಿಗೆ ಹೊಸ ಎಸ್‌ಎಲ್‌ಆರ್ (ಸೆಮಿ-ಆಟೋಮ್ಯಾಟಿಕ್ ರೈಫಲ್)ಗಳನ್ನು ನೀಡಲಾಗಿದೆ. ಈ ಮೂಲಕ ಉಗ್ರರ ಹೆಡೆ ಮುರಿಕಟ್ಟಲು ಗ್ರಾಮ ರಕ್ಷಣಾ ಸಿಬ್ಬಂದಿ (Village defense guards) ಮತ್ತಷ್ಟು ಬಲ ತುಂಬಿದಂತಾಗಿದೆ.
ವಿಶೇಷವಾಗಿ ದೋಡಾ, ಕಿಶ್ತ್ವಾರ್, ರಜೌರಿ, ಪೂಂಚ್ ಮತ್ತು ಜಮ್ಮುವಿನ ದೂರದ ಪ್ರದೇಶಗಳಲ್ಲಿ ಉಗ್ರಗಾಮಿಗಳನ್ನು ಎದುರಿಸಲು ಆಧುನಿಕ ಶಸ್ತ್ರಾಸ್ತ್ರಗಳನ್ನು ನೀಡಬೇಕು ಎಂದು ಗ್ರಾಮ ರಕ್ಷಣಾ ಸಿಬ್ಬಂದಿ ಒತ್ತಾಯಿಸಿದ್ದರು. ಗ್ರಾಮ ರಕ್ಷಣಾ ಸಿಬ್ಬಂದಿ ಸಾಮಾನ್ಯವಾಗಿ ಜಮ್ಮು ಪ್ರದೇಶದ ದೂರದ ಪ್ರದೇಶಗಳಲ್ಲಿ ಭಯೋತ್ಪಾದಕರನ್ನು ಬೇಟೆಯಾಡುವ ಶೋಧ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳಿಗೆ ಸಹಾಯ ಮಾಡುತ್ತಿದ್ದಾರೆ. ಇವರು ತಮಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಕೊರತೆ ಬಗ್ಗೆ ಈ ಹಿಂದೆ ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರವು ಅವರಿಗೆ ಇತ್ತೀಚಿನ ಶಸ್ತ್ರಾಸ್ತ್ರಗಳನ್ನು ಒದಗಿಸುವ ಮೂಲಕ ಬೇಡಿಕೆ ಈಡೇರಿಸಿದೆ.
ಕೇಂದ್ರ ಸರ್ಕಾರವು ಗ್ರಾಮ ರಕ್ಷಣಾ ಸಿಬ್ಬಂದಿಗೆ ಇತ್ತೀಚಿನ ಶಸ್ತ್ರಾಸ್ತ್ರಗಳನ್ನು ಎಸ್‌ಎಲ್‌ಆರ್ ರೂಪದಲ್ಲಿ ಒದಗಿಸಲು ನಿರ್ಧರಿಸಿತ್ತು ಮತ್ತು ಇದುವರೆಗೆ 200 ಕ್ಕೂ ಹೆಚ್ಚು ಎಸ್‌ಎಲ್‌ಆರ್ ರೈಫಲ್‌ಗಳನ್ನು ವಿತರಿಸಿದೆ. ಈ ಮೊದಲು ವಿಡಿಜಿ(ಗ್ರಾಮ ರಕ್ಷಣಾ ಸಿಬ್ಬಂದಿ) 303 ಬಂದೂಕುಗಳನ್ನು ಹೊಂದಿದ್ದರು. ಆದರೆ, ಈಗ ಅವುಗಳ ಬದಲಾಗಿ ಆಧುನಿಕ ಎಸ್‌ಎಲ್‌ಆರ್‌ಗಳನ್ನು ನೀಡಲಾಗುತ್ತಿದೆ. ಗೃಹ ಸಚಿವಾಲಯವು ಜಮ್ಮು, ರಜೌರಿ, ಪೂಂಚ್, ಕಥುವಾ ಮತ್ತು ರಿಯಾಸಿ ಜಿಲ್ಲೆಗಳಲ್ಲಿ ವಿಡಿಜಿಗಳಿಗೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಮಂಜೂರು ಮಾಡಿದೆ, ಇದು ಅವರ ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಸರ್ಕಾರದ ನಿರ್ಧಾರದಿಂದ ಸಂತಸ:ಜಮ್ಮುವಿನ ಗಡಿ ಪ್ರದೇಶವಾದ ಗರ್ಖಾಲ್‌ನಲ್ಲಿ ಪಾಕಿಸ್ತಾನ - ಭಾರತದ ಗಡಿಯ ಸಮೀಪ ವಾಸಿಸುತ್ತಿರುವ ಗ್ರಾಮ ರಕ್ಷಣಾ ಸಿಬ್ಬಂದಿ ಸರ್ಕಾರದ ಈ ನಿರ್ಧಾರದಿಂದ ಸಂತಸಗೊಂಡಿದ್ದಾರೆ. ಈಗ ಅವರು ತುಂಬಾ ಉತ್ಸಾಹದಿಂದ ಪೊಲೀಸರು ಮತ್ತು ಸೇನೆಯೊಂದಿಗೆ ಗಡಿಯ ಬಳಿ ಗಸ್ತು ತಿರುಗುತ್ತಿದ್ದಾರೆ.