ಹೈದರಾಬಾದ್: ಶನಿವಾರ (ಜೂನ್ 8) ನಿಧನರಾದ ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಮೋಜಿ ರಾವ್ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಚಿತ್ರರಂಗ, ರಾಜಕೀಯ, ಉದ್ಯಮ ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯರು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಮಾಜಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ, ಕೇಂದ್ರದ ಮಾಜಿ ಸಚಿವೆ ನಿರ್ಮಲಾ ಸೀತಾರಾಮನ್, ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ದಂಪತಿ, ನಟರಾದ ಚಿರಂಜೀವಿ, ಪವನ್ ಕಲ್ಯಾಣ್ ಅಂತಿಮ ನಮನ ಸಲ್ಲಿಸಿದರು.
ದೆಹಲಿ ಪ್ರವಾಸದಲ್ಲಿದ್ದ ಚಂದ್ರಬಾಬು ನಾಯ್ಡುನವರು ಶಂಶಾಬಾದ್ ವಿಮಾನ ನಿಲ್ದಾಣದಿಂದ ನೇರವಾಗಿ ರಾಮೋಜಿ ಫಿಲ್ಮ್ ಸಿಟಿಗೆ ಆಗಮಿಸಿದರು. ಪತ್ನಿ ಭುವನೇಶ್ವರಿ ಅವರೊಂದಿಗೆ ರಾಮೋಜಿ ರಾವ್ ಅವರ ಪಾರ್ಥಿವ ಶರೀರಕ್ಕೆ ಪುಷ್ಪ ಅರ್ಪಿಸಿ ಚಂದ್ರಬಾಬು ನಮನ ಸಲ್ಲಿಸಿದರು. ಈ ವೇಳೆ, ರಾಮೋಜಿ ರಾವ್ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ, ಅವರಿಗೆ ಧೈರ್ಯ ತುಂಬಿದರು. ಜೊತೆಗೆ ಟಿಡಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಮತ್ತು ಅವರ ಪತ್ನಿ ಬ್ರಹ್ಮಿಣಿ ಕೂಡ ರಾಮೋಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ರಾಮೋಜಿ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಅಸಾಮಾನ್ಯ ಸಾಧಕ: ಆಂಧ್ರಪ್ರದೇಶದ ನಿಯೋಜಿತ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಾತನಾಡಿ, ''ರಾಮೋಜಿ ರಾವ್ ಅವರು ತೆಲುಗು ಜನರ ಹೃದಯದಲ್ಲಿ ಚಿರಸ್ಥಾಯಿಯಾಗಿರುತ್ತಾರೆ. 'ಮಾರ್ಗದರ್ಶಿ', 'ಈನಾಡು', 'ಈಟಿವಿ' ಮತ್ತು 'ಫಿಲ್ಮ್ ಸಿಟಿ'ಯಂತಹ ಸಂಸ್ಥೆಗಳ ಸ್ಥಾಪನೆಯೊಂದಿಗೆ ಅಪಾರ ಕೊಡುಗೆ, ಸೇವೆ ಸಲ್ಲಿಸಿದ್ದಾರೆ. ಇಂತಹ ಮಹಾನ್ ನಾಯಕನ ನಿಧನವು ನನ್ನನ್ನು ತೀವ್ರವಾಗಿ ಕಾಡುತ್ತಿದೆ. ಅವರ ಸಾವಿನ ಸುದ್ದಿ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ'' ಎಂದು ಹೇಳಿದರು.
''ರಾಮೋಜಿ ರಾವ್ ತೆಲುಗಿನ ಬೆಳಕು. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಅಸಾಮಾನ್ಯ ಸಾಧನೆ ಮಾಡಿದವರು. ರಾಮೋಜಿ ರಾವ್ ಅವರ ನಿಧನ ಅತೀವ ನೋವು ತಂದಿದೆ. ಅಕ್ಷರ ಯೋಧ ಎಂದೇ ಖ್ಯಾತರಾಗಿರುವ ರಾಮೋಜಿ ರಾವ್ ಅವರ ಸೇವೆ ಅಪಾರ. ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಾರೆ ಎಂದು ಭಾವಿಸಿದ್ದೆ. ತೆಲುಗು ಜನರ ಬದುಕಿನಲ್ಲಿ ಅತ್ಯಂತ ಪ್ರಭಾವಿ ಛಾಪು ಮೂಡಿಸಿರುವ ರಾಮೋಜಿ ತೆಲುಗು ಜನರ ಆಸ್ತಿಯಾಗಿದ್ದು, ಅವರ ನಿಧನ ರಾಜ್ಯಕ್ಕೆ ಮಾತ್ರವಲ್ಲ, ದೇಶಕ್ಕೆ ದೊಡ್ಡ ನಷ್ಟ'' ಎಂದು ಸಂತಾಪ ಸೂಚಿಸಿದರು.
''ಅನುನಿತ್ಯ ಸಮಾಜಕ್ಕಾಗಿ ರಾಮೋಜಿ ರಾವ್ ಅವಿರತವಾಗಿ ಶ್ರಮಿಸಿದವರು. ಅವರು ಒಬ್ಬ ವ್ಯಕ್ತಿಯಲ್ಲ ಒಂದು ವ್ಯವಸ್ಥೆ. ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದವರು. ರಾಮೋಜಿ ರಾವ್ ಅವರು ಧರ್ಮಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟವಾಗಿ ಹೇಳುತ್ತಿದ್ದರು. ರಾಮೋಜಿ ರಾವ್ ಕಟ್ಟಿದ ಸಂಸ್ಥೆಗಳು ಶಾಶ್ವತ. ರಾಮೋಜಿ ಫಿಲ್ಮ್ ಸಿಟಿಯನ್ನು ಅತ್ಯುನ್ನತ ಗುಣಮಟ್ಟದೊಂದಿಗೆ ಸ್ಥಾಪಿಸಲಾಗಿದೆ. ರಾಮೋಜಿ ರಾವ್ ಅವರು ತಮ್ಮ ಜೀವಿತಾವಧಿಯಲ್ಲಿ ವಿಶ್ವಾಸಾರ್ಹತೆಯನ್ನು ಗಳಿಸಿದ್ದರು. ತೆಲುಗು ನಾಡನ್ನು ಮುಂದೆ ಕೊಂಡೊಯ್ಯಲು ದುಡಿದವರು. ಆಂಧ್ರದ ಅಭಿವೃದ್ಧಿಗೆ ಅವರು ನೀಡಿದ ಸ್ಫೂರ್ತಿಯೊಂದಿಗೆ ನಾವು ಮುನ್ನಡೆಯುತ್ತೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ'' ಎಂದು ಟಿಡಿಪಿ ಅಧ್ಯಕ್ಷ ತಿಳಿಸಿದರು.