ಕರ್ನಾಟಕ

karnataka

ETV Bharat / bharat

ಉದ್ಘಾಟನೆಗೆ ಸಜ್ಜಾದ ವಿಶ್ವದ ಮೊದಲ ವೈದಿಕ ಗಡಿಯಾರ; ಇದರ ವೈಶಿಷ್ಟ್ಯತೆ ಹೀಗಿದೆ

ಈ ವೈದಿಕ ಗಡಿಯಾರವು 30 ಮುಹೂರ್ತಗಳೊಂದಿಗೆ ನಿಖರ ಸಮಯ ತಿಳಿಸಲಿದೆ. ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ, ಗ್ರಹಗತಿಗಳ ಬಗ್ಗೆ, ಸೂರ್ಯಗ್ರಹಣ, ಚಂದ್ರನಗ್ರಹಣ ಸೇರಿದಂತೆ ಇತರ ಮಾಹಿತಿಯನ್ನು ಪಡೆಯಬಹುದು.

ವಿಶ್ವದ ಮೊದಲ ವೇದ ಗಡಿಯಾರ
ವಿಶ್ವದ ಮೊದಲ ವೇದ ಗಡಿಯಾರ

By ETV Bharat Karnataka Team

Published : Feb 19, 2024, 4:29 PM IST

ವಿಶ್ವದ ಮೊದಲ ವೇದ ಗಡಿಯಾರ

ಉಜ್ಜಯಿನಿ:ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ವಿಶೇಷತೆವುಳ್ಳ ವಿಶ್ವದ ಮೊದಲ ವೇದ ಗಡಿಯಾರ ಅಳವಡಿಸಲಾಗುತ್ತಿದ್ದು, ಮಾರ್ಚ್ 1 ರಂದು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಈ ಗಡಿಯಾರ ಹಲವು ವೈಶಿಷ್ಟ್ಯತೆ ಹೊಂದಿದ್ದು ರಾಜ್ಯ ಅಷ್ಟೇ ಅಲ್ಲದೇ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಲಿದೆ.

''ಉಜ್ಜಯಿನಿಯ ಜಿವಾಜಿ ರಾವ್ ವೀಕ್ಷಣಾಲಯದಲ್ಲಿ ಅದಕ್ಕೆಂದೇ ಗೋಪುರ ನಿರ್ಮಿಸಲಾಗಿದ್ದು, ಅದರ ಮೇಲೆ 10x12 ಅಡಿಯ ವೈದಿಕ ಗಡಿಯಾರವನ್ನು ಸ್ಥಾಪಿಸಲಾಗುತ್ತಿದೆ. ಈ ಗಡಿಯಾರವು ಹಿಂದೂ ಮುಹೂರ್ತವನ್ನು ಹೇಳುವ ಮೂಲಕ ಹಲವು ವಿಶೇಷಗಳನ್ನು ತಿಳಿಸಲಿದೆ. 30 ಮುಹೂರ್ತಗಳೊಂದಿಗೆ ನಿಖರ ಸಮಯವನ್ನು ಸಹ ಹೇಳಲಿದೆ. ವಿಶ್ವದ ಮೊದಲ ವೈದಿಕ ಗಡಿಯಾರ ಇದಾಗಿರಲಿದ್ದು, ಉಜ್ಜಯಿನಿ ಇಂತಹ ಹಲವು ವಿಶೇಷತೆಗೆ ಸಾಕ್ಷಿ ಆಗಲಿದೆ. ಮಾರ್ಚ್ 1 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ವೈದಿಕ ಗಡಿಯಾರವನ್ನು ವರ್ಚುವಲ್ ಮೂಲಕ ಉದ್ಘಾಟಿಸಲಿದ್ದಾರೆ'' ಎಂದು ಉಜ್ಜಯಿನಿ ವಿಕ್ರಮ್ ಸಂಶೋಧನಾ ಸಂಸ್ಥೆಯ ನಿರ್ದೇಶಕ ಶ್ರೀರಾಮ್ ತಿವಾರಿ ತಿಳಿಸಿದ್ದಾರೆ.

''ಈ ವೈದಿಕ ಗಡಿಯಾರದಲ್ಲಿ ಪಂಚಾಂಗವೂ ಗೋಚರಿಸುತ್ತದೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗಿನ ಮಾಹಿತಿ, ಗ್ರಹಗಳ ವಿವರವಾದ ಮಾಹಿತಿ, ಯೋಗ, ನಕ್ಷತ್ರ, ಸೂರ್ಯಗ್ರಹಣ, ಚಂದ್ರಗ್ರಹಣ ಸೇರಿದಂತೆ ಹಲವು ಮಾಹಿತಿ ಕೂಡ ಗೋಚರಿಸುತ್ತದೆ. ದಿನದ 24 ಗಂಟೆಗಳನ್ನು ಮುಹೂರ್ತಗಳಾಗಿ ವಿಂಗಡಿಸಲಾಗುತ್ತದೆ. ಪ್ರಪಂಚದಾದ್ಯಂತದ ವಿವಿಧ ಸ್ಥಳಗಳಲ್ಲಿನ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯ ಲಭ್ಯವಾಗಲಿದೆ. ಗಡಿಯಾರದ ಎರಡೂ ಬದಿಗಳಲ್ಲಿ 12 ರಾಶಿಗಳ ಚಿಹ್ನೆಗಳು ಇರಲಿದ್ದು ಸಮಗ್ರ ಕ್ಯಾಲೆಂಡರ್ ಆಗಿ ಕಾರ್ಯನಿರ್ವಹಿಸುತ್ತದೆ. ಸ್ಮಾರ್ಟ್‌ಫೋನ್‌ಗಳು, ಕಂಪ್ಯೂಟರ್‌ಗಳು, ಟೆಲಿವಿಷನ್‌ಗಳು ಮತ್ತು ಇತರ ಸಾಧನಗಳಲ್ಲಿ ಲಭ್ಯವಿರಲಿದೆ.

ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ಜನರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಎಲ್ಲ ಮಾಹಿತಿಯನ್ನು ವೀಕ್ಷಿಸಬಹುದು. ಉಜ್ಜಯಿನಿ ಸಮಯ ಮತ್ತು ಭೌಗೋಳಿಕ ಲೆಕ್ಕಾಚಾರದಲ್ಲಿ ಪ್ರಪಂಚದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಹಾಗಾಗಿ ನಮ್ಮ ಪ್ರಾಚೀನ ಸಮಯದ ಲೆಕ್ಕಾಚಾರದ ವಿಧಾನವನ್ನು ಮರುಸ್ಥಾಪಿಸುವ ಗುರಿಯೊಂದಿಗೆ ನಾವು ಈ ಗಡಿಯಾರವನ್ನು ಸ್ಥಾಪಿಸುತ್ತಿದ್ದೇವೆ. ಮುನ್ಸೂಚನೆಗಳ ಬಗ್ಗೆ ಎಲ್ಲಾ ಮಾಹಿತಿಯು ಅಪ್ಲಿಕೇಶನ್ ಮೂಲಕ ಲಭ್ಯವಿರುತ್ತದೆ. ಈ ವೈದಿಕ ಗಡಿಯಾರ ತಯಾರಿಸಲು ಅಂದಾಜು 1 ಕೋಟಿ 62 ಲಕ್ಷ ರೂ. ಖರ್ಚು ತಗುಲಿದೆ'' ಎಂದು ಶ್ರೀರಾಮ್ ತಿವಾರಿ ಮಾಹಿತಿ ನೀಡಿದ್ದಾರೆ.

ಜಿಪಿಎಸ್‌ಗೆ ಸಂಪರ್ಕಿಸುವ ವ್ಯೆವಸ್ಥೆ: ಜಿವಾಜಿ ವೀಕ್ಷಣಾಲಯವನ್ನು ಜೈಪುರದ ಮಹಾರಾಜ ಸವಾಯಿ ರಾಜಾ ಜೈಸಿಂಗ್ 1719 ರಲ್ಲಿ ನಿರ್ಮಿಸಿದರು. ಕರ್ಕಾಟಕ ಸಂಕ್ರಾಂತಿ ವಲಯದಲ್ಲಿ ಬರುವ ಉಜ್ಜಯಿನಿಯು ಪ್ರಾಚೀನ ಕಾಲದಲ್ಲಿಯೇ ಸಮಯದ ಲೆಕ್ಕಾಚಾರದ ಕೇಂದ್ರವಾಗಿತ್ತು. ಈ ಕಾರಣಕ್ಕಾಗಿ, ಪ್ರಾಚೀನ ಕಾಲದಲ್ಲಿ ಇಲ್ಲಿ ಕರ್ಕರಾಜ ದೇವಾಲಯವನ್ನು ನಿರ್ಮಿಸಲಾಯಿತು. ಇದರ ಜೊತೆಗೆ, ರಾಜ ಜೈ ಸಿಂಗ್ ದೇಶದಲ್ಲಿ ನಾಲ್ಕು ವೀಕ್ಷಣಾಲಯಗಳನ್ನು ಸ್ಥಾಪಿಸಿದ್ದರು. ಅವುಗಳಲ್ಲಿ ಒಂದು ಉಜ್ಜಯಿನಿಯಲ್ಲಿದೆ. ಇದರೊಂದಿಗೆ, ಚಕ್ರವರ್ತಿ ವಿಕ್ರಮಾದಿತ್ಯನ ರಾಜಸಭೆಯ ನವರತ್ನಗಳಲ್ಲಿ ಒಂದಾದ ಖಗೋಳಶಾಸ್ತ್ರಜ್ಞ ವರಹ್ ಮಿಹಿರ್ ಮತ್ತು ಇತರ ವಿದ್ವಾಂಸರು ಬರೆದ ಪಠ್ಯಗಳಲ್ಲಿ ಉಜ್ಜಯಿನಿಯಲ್ಲಿ ಸಮಯದ ಲೆಕ್ಕಾಚಾರದ ಉಲ್ಲೇಖವು ಕಂಡುಬರುತ್ತದೆ. ಹಾಗಾಗಿ ಇಲ್ಲಿ ವಿಶ್ವದ ಮೊದಲ ವೇದ ಗಡಿಯಾರವನ್ನು ಸ್ಥಾಪಿಸಲಾಗುತ್ತಿದೆ. ಲಕ್ನೋದ ಆರೋಹನ್ ಸಂಸ್ಥೆಯು ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡು ಈ ವೇದ ಗಡಿಯಾರವನ್ನು ನಿರ್ಮಿಸುತ್ತಿದೆ. ಸೂರ್ಯೋದಯದ ಆಧಾರದ ಮೇಲೆ ಸಮಯವನ್ನು ಲೆಕ್ಕಾಚಾರ ಮಾಡುವ ಈ ವೈದಿಕ ಗಡಿಯಾರವು ಹಿಂದೂ ಧರ್ಮಕ್ಕೆ ಸಂಬಂಧಿಸಿದ ಅನೇಕ ವಿಚಾರಗಳನ್ನು ನೀಡಲಿದೆ. ಈ ಗಡಿಯಾರವನ್ನು ಇಂಟರ್ನೆಟ್ ಮತ್ತು ಜಿಪಿಎಸ್‌ಗೆ ಸಂಪರ್ಕಿಸುವ ವ್ಯವಸ್ಥೆ ಕೂಡ ಮಾಡಲಾಗುತ್ತಿದ್ದು ಅದನ್ನು ಎಲ್ಲಿ ಬೇಕಾದರೂ ಬಳಸಬಹುದು.

ಇದನ್ನೂ ಓದಿ:ಇದೇನೂ ಮನೆಯೋ, ಗಡಿಯಾರಗಳ ಸಂಗ್ರಹಾಲಯವೋ; ಬಂಟ್ವಾಳದ ಶಶಿ ಭಟ್ಟರ ಮನೆಯಲ್ಲಿದೆ 120ಕ್ಕೂ ಹೆಚ್ಚು ಗಡಿಯಾರ

ABOUT THE AUTHOR

...view details