ನವದೆಹಲಿ: ಪ್ರವಾಸಿಗರು, ನುರಿತ ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಅಮೆರಿಕಕ್ಕೆ ಪ್ರಯಾಣಿಸುವ ಭಾರತೀಯ ಪ್ರಯಾಣಿಕರಿಗೆ ಹೆಚ್ಚುವರಿ 2,50,000 ವೀಸಾ ಸಂದರ್ಶನಗಳನ್ನು (ಅಪಾಯಿಂಟ್ಮೆಂಟ್) ನಡೆಸಲಾಗುವುದು ಎಂದು ಭಾರತದಲ್ಲಿನ ಯುಎಸ್ ರಾಯಭಾರ ಕಚೇರಿ ಸೋಮವಾರ ಪ್ರಕಟಿಸಿದೆ.
"ಇತ್ತೀಚೆಗೆ ಬಿಡುಗಡೆಯಾದ ಸಂದರ್ಶನದ ಹೊಸ ಸ್ಲಾಟ್ಗಳು ಲಕ್ಷಾಂತರ ಭಾರತೀಯ ಅರ್ಜಿದಾರರಿಗೆ ಸಮಯೋಚಿತವಾಗಿ ಸಂದರ್ಶನಗಳಿಗೆ ಹಾಜರಾಗಲು ಸಹಾಯ ಮಾಡುತ್ತವೆ. ಅಮೆರಿಕ - ಭಾರತಗಳ ಸಂಬಂಧಕ್ಕೆ ಆಧಾರವಾಗಿರುವ ಹಾಗೂ ಜನರ ನಡುವಿನ ಸಂಬಂಧಗಳ ಬೆನ್ನೆಲುಬಾಗಿರುವ ಪ್ರಯಾಣವನ್ನು ಈ ಕ್ರಮ ಸುಗಮಗೊಳಿಸಲಿದೆ" ಎಂದು ಭಾರತದಲ್ಲಿನ ಯುಎಸ್ ಮಿಷನ್ ಹೇಳಿದೆ.
ಭಾರತೀಯ ಮಿಷನ್ಗೆ ಈಗಾಗಲೇ ಸತತ ಎರಡನೇ ವರ್ಷ ಒಂದು ಮಿಲಿಯನ್ ವಲಸೆಯೇತರ ವೀಸಾ ಅರ್ಜಿಗಳು ಬಂದಿವೆ ಎಂದು ಅದು ವಿವರಿಸಿದೆ.
"ಈ ಬೇಸಿಗೆಯ ನಮ್ಮ ವಿದ್ಯಾರ್ಥಿ ವೀಸಾ ಋತುವಿನಲ್ಲಿ, ದಾಖಲೆ ಸಂಖ್ಯೆಯ ಅರ್ಜಿ ಪ್ರಕ್ರಿಯೆಗೊಳಿಸುವುದನ್ನು ಮುಂದುವರಿಸಿದ್ದೇವೆ ಮತ್ತು ಮೊದಲ ಬಾರಿಯ ಎಲ್ಲಾ ವಿದ್ಯಾರ್ಥಿ ಅರ್ಜಿದಾರರು ಭಾರತದಾದ್ಯಂತದ ನಮ್ಮ ಐದು ಕಾನ್ಸುಲರ್ ವಿಭಾಗಗಳ ಪೈಕಿ ಒಂದರಲ್ಲಿ ಸಂದರ್ಶನಕ್ಕೆ ಹಾಜರಗಾಲು ಸಾಧ್ಯವಾಗಿದೆ. ನಾವು ಈಗ ಕುಟುಂಬಗಳನ್ನು ಒಟ್ಟುಗೂಡಿಸುವುದು, ವ್ಯವಹಾರಗಳನ್ನು ಸಂಪರ್ಕಿಸುವುದು ಮತ್ತು ಪ್ರವಾಸೋದ್ಯಮವನ್ನು ಸುಗಮಗೊಳಿಸುವತ್ತ ಗಮನ ಹರಿಸಿದ್ದೇವೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.