ಬಹ್ರೈಚ್(ಉತ್ತರ ಪ್ರದೇಶ):ಕಳೆದ ಮೂರು ತಿಂಗಳಿಂದ ಜನರ ಮೇಲೆ ದಾಳಿ ಮಾಡುತ್ತಿದ್ದ ನರಭಕ್ಷಕ ತೋಳಗಳನ್ನು ಹಿಡಿಯುವ ಆಪರೇಷನ್ ಬೇಡಿಯಾ ಅಡಿಯಲ್ಲಿ ಐದನೇ ತೋಳವನ್ನು ಸೆರೆ ಹಿಡಿಯಲಾಗಿದ್ದು, ಇನ್ನೊಂದು ತೋಳಕ್ಕೆ ಬಲೆ ಬೀಸಲಾಗಿದೆ. ಜುಲೈ ಮಧ್ಯಭಾಗದಲ್ಲಿ ಇಲ್ಲಿನ ಅರಣ್ಯದಂಚಿನ ಗ್ರಾಮ ಪ್ರದೇಶಗಳಲ್ಲಿ ದಾಳಿ ಮಾಡುತ್ತಿದ್ದ ಆರು ತೋಳಗಳು ಇದುವರೆಗೆ 8 ಜನರನ್ನು ಸಾಯಿಸಿದ್ದು, 20ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿವೆ.
ಹರಬ್ನಸ್ಪುರ್ ಗ್ರಾಮದ ಘಘ್ರಾ ನದಿ ತೀರದಲ್ಲಿ ಪಗ್ಮಾರ್ಕ್ ತಂತ್ರದ ಮೂಲಕ ಐದನೇ ತೋಳವನ್ನು ಹಿಡಿಯಲಾಗಿದೆ ಎಂದು ವಿಭಾಗೀಯ ಅರಣ್ಯಾಧಿಕಾರಿ ಅಜಿತ್ ಸಿಂಗ್ ತಿಳಿಸಿದ್ದಾರೆ.
ಆರು ತೋಳಗಳಲ್ಲಿ ಐದು ಸಿಕ್ಕಿವೆ. ತಪ್ಪಿಸಿಕೊಂಡಿರುವ ಆರನೇ ತೋಳ ಅಲ್ಫಾ ಗುಂಪಿನ ನಾಯಕನಾಗಿರಬಹುದು. ಅದು ಸೆರೆ ಸಿಗುವವರೆಗೆ ಸಮಸ್ಯೆ ತಪ್ಪಿದ್ದಲ್ಲ. ಅದನ್ನೂ ಕೂಡ ಶೀಘ್ರದಲ್ಲೇ ಸೆರೆ ಹಿಡಿಯಲಾಗುವುದು ಎಂದರು.
ಅದರೆ, ಈ ವಿಚಾರವನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರೇಣು ಸಿಂಗ್ ನಿರಾಕರಿಸಿದ್ದು, ಆರನೇ ತೋಳ ಕುಂಟ ತೋಳವಾಗಿದೆ. ಇದು ನಿಜವೂ ಆಗಲಾರದು. ಈಗ ಸೆರೆ ಸಿಕ್ಕಿರುವುದು ಹೆಣ್ಣು ತೋಳ ಎಂದಿದ್ದಾರೆ.
ಸೋಮವಾರ ರಾತ್ರಿ ಈ ಪ್ರದೇಶದಲ್ಲಿ ತೋಳದ ಕಾಲಿನ ಹೆಜ್ಜೆ ಗುರುತು ಆಧರಿಸಿ ಅರಣ್ಯ ಇಲಾಖೆ ತಂಡ ಸೆರೆಗೆ ಸಿದ್ದತೆ ನಡೆಸಿತ್ತು. ಆದಾಗ್ಯೂ ರಾತ್ರಿ ಕಾರ್ಯಾಚರಣೆ ಸಾಧ್ಯವಾಗಲಿಲ್ಲ. ನಾಲ್ಕು ತಂಡ ಈ ಪ್ರದೇಶದಲ್ಲಿ ತೋಳ ಸೆರೆ ಹಿಡಿದಿದೆ. ಈ ವೇಳೆ ತೋಳ ಪರಾರಿಯಾಗಲು ಯತ್ನಿಸಿತ್ತು. ಆದರೆ, ಸಿಬ್ಬಂದಿ ಹಾಗೂ ಗ್ರಾಮಸ್ಥರ ಸಹಾಯದಿಂದ ನೆಟ್ ಮೂಲಕ ಸೆರೆ ಹಿಡಿಯಲಾಗಿದ್ದು, ಬೋನಿಗೆ ಹಾಕಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಗಸ್ಟ್ 29ರಂದು ನಾಲ್ಕನೇ ತೋಳ ಸೆರೆ ಹಿಡಿದ ಬಳಿಕ ಉಳಿದ ಎರಡು ತೋಳಗಳು ಎಚ್ಚರವಹಿಸಿದ್ದವು. ಈ ಹಿನ್ನೆಲೆಯಲ್ಲಿ ಐದನೇ ತೋಳ ಸೆರೆಗೆ ಹಳೆಯ ಪಗ್ಮಾರ್ಕ್ ತಂತ್ರ ಬಳಸಿ ಹಿಡಿಯಲಾಗಿದೆ. ಇದೀಗ ಸೆರೆ ಹಿಡಿದಿರುವ ತೋಳವನ್ನು ವನ್ಯಜೀವಿ ತಜ್ಞರ ಸಲಹೆ ಮೇರೆಗೆ ಮೃಗಾಲಯಕ್ಕೆ ಕಳುಹಿಸಲಾಗುವುದು ಎಂದರು.
ಬಹ್ರೈಚ್ ಜಿಲ್ಲೆಯಲ್ಲಿಯ ಮಹಸಿ ತಹಶೀಲ್ನಲ್ಲಿ ತೋಳಗಳು ದಾಳಿ ನಡೆಸಿದ್ದು, ಜುಲೈ 17ರಿಂದ ಆಪರೇಷನ್ ಬೇಡಿಯಾ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಮುಂದಾಗಿತ್ತು. ತೋಳಗಳ ಹಾವಳಿ ತಡೆಯಲು ಮತ್ತು ಅವುಗಳ ಚಲನವಲನ ಕಂಡುಹಿಡಿಯಲು ಡ್ರೋನ್‌ಗಳನ್ನೂ ಬಳಸಲಾಗಿತ್ತು.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಮುಂದುವರಿದ ತೋಳಗಳ ದಾಳಿ: ಬಿಹಾರದಲ್ಲೂ ಹೆಚ್ಚಿದ ಉಪಟಳ