ಅಗರ್ತಲಾ(ತ್ರಿಪುರಾ): ಅಗರ್ತಲಾದಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ಬಸ್ ಮೇಲೆ ಬಾಂಗ್ಲಾದೇಶದಲ್ಲಿ ದಾಳಿ ನಡೆದಿದೆ ಎಂದು ತ್ರಿಪುರಾದ ಸಾರಿಗೆ ಸಚಿವ ಸುಶಾಂತ ಚೌಧರಿ ಆರೋಪಿಸಿದ್ದಾರೆ. ಬಾಂಗ್ಲಾದೇಶದ ಬ್ರಹ್ಮನ್ ಬಾರಿಯಾ ಜಿಲ್ಲೆಯ ಬಿಶ್ವಾ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.
"ತ್ರಿಪುರಾದಿಂದ ಕೋಲ್ಕತಾಗೆ ತೆರಳುತ್ತಿದ್ದ ಸಹ್ಯಮೋಲಿ ಪರಿಬಹನ್ ಬಸ್ ಮೇಲೆ ಬಾಂಗ್ಲಾದೇಶದ ಬ್ರಹ್ಮನ್ ಬಾರಿಯಾ ಬಿಶ್ವಾ ರಸ್ತೆಯಲ್ಲಿ ದಾಳಿ ಮಾಡಲಾಗಿದೆ. ಈ ಘಟನೆಯಿಂದ ಬಸ್ಸಿನಲ್ಲಿದ್ದ ಭಾರತೀಯ ಪ್ರಯಾಣಿಕರು ಭಯಭೀತರಾಗಿದ್ದರು. ಬಸ್ ತನ್ನ ಲೇನ್ ನಲ್ಲಿಯೇ ಇದ್ದರೂ ಉದ್ದೇಶಪೂರ್ವಕವಾಗಿ ಟ್ರಕ್ವೊಂದು ಡಿಕ್ಕಿ ಹೊಡೆದಿದೆ. ಈ ಸಮಯದಲ್ಲಿ ಬಸ್ ಮುಂದೆ ಚಲಿಸುತ್ತಿದ್ದ ಆಟೋರಿಕ್ಷಾಗೆ ಬಸ್ ಡಿಕ್ಕಿ ಹೊಡೆದಿದೆ" ಎಂದು ಚೌಧರಿ ಶನಿವಾರ ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
"ಈ ಘಟನೆಯ ನಂತರ ಸ್ಥಳೀಯರು ಜಮಾಯಿಸಿ ಬಸ್ನಲ್ಲಿದ್ದ ಭಾರತೀಯ ಪ್ರಯಾಣಿಕರಿಗೆ ಬೆದರಿಕೆ ಹಾಕಲು ಪ್ರಾರಂಭಿಸಿದರು. ಭಾರತ ವಿರೋಧಿ ಘೋಷಣೆಗಳನ್ನು ಕೂಗಿ, ಭಾರತೀಯ ಪ್ರಯಾಣಿಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಮತ್ತು ಅವರಿಗೆ ಜೀವ ಬೆದರಿಕೆ ಹಾಕಿದರು. ನಾನು ಈ ಘಟನೆಯನ್ನು ಬಲವಾಗಿ ಖಂಡಿಸುತ್ತೇನೆ ಮತ್ತು ಭಾರತೀಯ ಪ್ರಯಾಣಿಕರ ಸುರಕ್ಷತೆಗಾಗಿ ಕ್ರಮಕೈಗೊಳ್ಳುವಂತೆ ನೆರೆಯ ಬಾಂಗ್ಲಾದೇಶ ಸರ್ಕಾರಕ್ಕೆ ಒತ್ತಾಯಿಸುತ್ತೇನೆ" ಎಂದು ಅವರು ಹೇಳಿದರು.
ಅರ್ಧದಷ್ಟು ದೂರ ಕಡಿಮೆಯಾಗುವುದರಿಂದ ಕೊಲ್ಕತ್ತಾ ಮತ್ತು ಅಗರ್ತಲಾ ನಡುವೆ ಚಲಿಸುವ ಬಸ್ಸುಗಳು ಢಾಕಾ ಮೂಲಕ ಸಂಚರಿಸುತ್ತವೆ. ಇದು ವಿಮಾನದಲ್ಲಿ ಪ್ರಯಾಣಿಸುವುದಕ್ಕಿಂತ ಅಗ್ಗವಾಗಿದೆ. ಕೊಲ್ಕತ್ತಾ ಮತ್ತು ಅಗರ್ತಲಾ ನಡುವೆ ಅಸ್ಸಾಂ ಮೂಲಕ ರೈಲಿನಲ್ಲಿ ಪ್ರಯಾಣಿಸಿದರೆ 30 ಗಂಟೆಗಳಿಗಿಂತ ಹೆಚ್ಚು ಸಮಯ ಬೇಕಾಗುತ್ತದೆ. ಆದರೆ ಢಾಕಾ ಮೂಲಕ ಬಸ್ ಪ್ರಯಾಣದ ಅವಧಿ ಇದಕ್ಕೂ ಕಡಿಮೆಯಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ, ತಮಗೆ ಈ ದಾಳಿಯ ಬಗ್ಗೆ ಮಾಹಿತಿ ಬಂದಿದ್ದು ಹೆಚ್ಚಿನ ವಿವರಗಳನ್ನು ಪಡೆಯಲು ಪ್ರಯತ್ನಿಸಲಾಗುತ್ತಿದೆ ಎಂದಿದ್ದಾರೆ.
"ಅಗರ್ತಲಾದಿಂದ ಕೋಲ್ಕತಾಗೆ ತೆರಳುತ್ತಿದ್ದ ಬಸ್ ಮೇಲೆ ಬ್ರಹ್ಮನ್ಬಾರಿಯಾದ ಬಿಶ್ವಾ ರಸ್ತೆಯಲ್ಲಿ ಶನಿವಾರ ದಾಳಿ ನಡೆದ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ. ನಾನು ಈ ವಿಷಯದ ಬಗ್ಗೆ ನಿಖರವಾದ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದೇನೆ" ಎಂದು ಅವರು ಹೇಳಿದರು.
ನೆರೆಯ ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಹಾ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವುದು ಈಗ ಇಡೀ ಜಗತ್ತಿಗೆ ಗೊತ್ತಾಗಿದೆ ಎಂದರು.
"ನಮ್ಮ ರಾಜ್ಯವು ಮೂರು ಬದಿಗಳಲ್ಲಿ ಬಾಂಗ್ಲಾದೇಶದಿಂದ ಸುತ್ತುವರೆದಿರುವುದರಿಂದ, ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಕಟ್ಟುನಿಟ್ಟಾದ ನಿಗಾ ವಹಿಸುವಂತೆ ಬಿಎಸ್ಎಫ್ ಮತ್ತು ಪೊಲೀಸರಿಗೆ ಸೂಚಿಸಿದ್ದೇನೆ" ಎಂದು ಅವರು ಹೇಳಿದರು.
ಇದನ್ನೂ ಓದಿ : ಜನಸಂಖ್ಯಾ ಬೆಳವಣಿಗೆ ದರ ಶೇ 2.1ಕ್ಕಿಂತ ಕಡಿಮೆಯಾದರೆ ಅಪಾಯ, ಕನಿಷ್ಠ 3 ಮಕ್ಕಳನ್ನಾದರೂ ಹೆರಬೇಕು: ಭಾಗವತ್