ಅಮರಾವತಿ (ಆಂಧ್ರ ಪ್ರದೇಶ): ಆಂಧ್ರ ಪ್ರದೇಶದ ಎನ್ಡಿಎ ಸರ್ಕಾರವು ವಕ್ಫ್ ಆಸ್ತಿಗಳನ್ನು ಸಂರಕ್ಷಿಸಲು ಮತ್ತು ಮಂಡಳಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ವಕ್ಫ್ ಮಂಡಳಿಯನ್ನು ವಿಸರ್ಜಿಸಿದೆ.
2023ರ ಅಕ್ಟೋಬರ್ 21ರಂದು 11 ಸದಸ್ಯರ ವಕ್ಫ್ ಮಂಡಳಿಗೆ ಮೂವರು ಸದಸ್ಯರನ್ನು ಆಯ್ಕೆ ಮಾಡಿ ಇತರ ಏಳು ಮಂದಿಯನ್ನು ನಾಮನಿರ್ದೇಶನ ಮಾಡಿದ್ದ ಸರ್ಕಾರಿ ಆದೇಶವನ್ನು (GO) ಇದೀಗ ರದ್ದು ಮಾಡಲಾಗಿದೆ.
ಉತ್ತಮ ಆಡಳಿತ, ವಕ್ಫ್ ಆಸ್ತಿಗಳನ್ನು ಸಂರಕ್ಷಿಸುವ ಹಾಗು ವಕ್ಫ್ ಮಂಡಳಿಯ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವ ಹಿತದೃಷ್ಟಿಯಿಂದ ಸರ್ಕಾರ, ಆದೇಶ ಸಂಖ್ಯೆ (ಎಂಎಸ್ ಸಂಖ್ಯೆ) 47 ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂತೆಗೆದುಕೊಳ್ಳುತ್ತಿದೆ ಎಂದು ಸರ್ಕಾರದ ಕಾರ್ಯದರ್ಶಿ ಕೆ.ಹರ್ಷವರ್ಧನ್ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
ದೀರ್ಘಕಾಲದವರೆಗೆ ಮಂಡಳಿ ಕಾರ್ಯನಿರ್ವಹಿಸುತ್ತಿಲ್ಲ. ಮಂಡಳಿಯನ್ನು ರಚಿಸುವ ಆದೇಶದ ಕಾನೂನುಬದ್ಧತೆಯನ್ನು ಪ್ರಶ್ನಿಸಿ ರಿಟ್ ಅರ್ಜಿಗಳಿವೆ ಎಂದು ಆಂಧ್ರ ಪ್ರದೇಶ ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ.
ಈ ನಿರ್ಧಾರ ತೆಗೆದುಕೊಳ್ಳುವಾಗ ರಿಟ್ ಅರ್ಜಿಗಳಲ್ಲಿ ಹೈಕೋರ್ಟ್ನ ಅವಲೋಕನಗಳನ್ನು ರಾಜ್ಯ ಪರಿಗಣಿಸಿದೆ ಎಂದು ಸರ್ಕಾರಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: 8 ಸಾವಿರ ಕೋಟಿ ಮೌಲ್ಯದ ಭೂಮಿ ಸ್ವಾಧೀನಕ್ಕೆ ಮುಂದಾದ ಬಿಹಾರ ಸರ್ಕಾರ: ಏನಿದು ಬೇತಿಯಾ ರಾಜ್ ಎಸ್ಟೇಟ್?