ಆಗ್ರಾ(ಉತ್ತರ ಪ್ರದೇಶ):ತಾಜ್ ನಗರಿಯಲ್ಲಿ ದಿನೇ ದಿನೇ ಮಂಗಗಳ ಉಪದ್ರವ ಹೆಚ್ಚಾಗುತ್ತಿದೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರು ಹಾಗು ಸ್ಥಳೀಯರ ಮೇಲೆ ನಿತ್ಯ ಒಂದಿಲ್ಲೊಂದು ಕಡೆ ದಾಳಿ ನಡೆಯತ್ತಲೇ ಇವೆ. ಅದರಲ್ಲೂ ತಾಜ್ ಮಹಲ್, ಆಗ್ರಾ ಕೋಟೆ, ರೈಲ್ವೆ ನಿಲ್ದಾಣದಲ್ಲಿ ಮಂಗಗಳ ದಾಳಿ ವರದಿಗಳಾಗುತ್ತಿವೆ. ಇದನ್ನು ಗಮನಿಸಿರುವ ಮುನ್ಸಿಪಲ್ ಕಾರ್ಪೊರೇಷನ್ ದೇಶದಲ್ಲೇ ಮೊದಲ ಮಂಗಗಳ ರಕ್ಷಣೆ ಮತ್ತು ಆರೈಕೆ ಕೇಂದ್ರ ನಿರ್ಮಾಣ ಕಾರ್ಯಕ್ಕೆ ಸಜ್ಜಾಗಿದೆ. ಇದಕ್ಕಾಗಿ ಆಗ್ರಾದ ಸಿಕಂದರಾ ಎಂಬ ಪ್ರದೇಶದಲ್ಲಿ 5 ಎಕರೆ ಜಾಗ ಗುರುತಿಸಲಾಗಿದ್ದು, ಒಟ್ಟು 14 ರೂ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ತಾಜ್ ಮಹಲ್, ತಾಜ್‌ಗಂಜ್ ಪ್ರದೇಶ, ಏಕಲವ್ಯ ಸ್ಟೇಡಿಯಂ, ಮಧು ನಗರ, ರಾಜಮಂಡಿ ಪ್ರದೇಶ, ಎಸ್‌ಎನ್ ಮೆಡಿಕಲ್ ಕಾಲೊನಿ, ಮಂಟೋಲಾ, ಪವರ್ ಹೌಸ್, ಸಿಕಂದರಾ ಸ್ಮಾರಕ, ರಾಂಬಾಗ್, ನುನಿಹೈ, ಬೆಲಂಗಂಜ್, ಕಲೆಕ್ಟರೇಟ್, ಪೊಲೀಸ್ ಲೈನ್ ಸೇರಿದಂತೆ ನಗರದ ಪ್ರಮುಖ ಪ್ರದೇಶದಲ್ಲಿ ಮಂಗಗಳ ಉಪಟಳ ಜಾಸ್ತಿ. ಮಹಾನಗರ ಪಾಲಿಕೆಯ ಪ್ರಕಾರ, ನಗರದಲ್ಲಿ ಸುಮಾರು 90 ಸಾವಿರ ಮಂಗಗಳಿದ್ದು ದಿನವೂ ದಾಳಿ ನಡೆಯುತ್ತಲೇ ಇವೆ. ಇವುಗಳ ದಾಳಿಗೊಳಗಾಗಿ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆ ಆಗಮಿಸುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ.
ಆಗ್ರಾದ ಹಳೆಯ ನಗರ ಬೆಳಂಗಂಜ್, ಭೈನ್ರೋ ಬಜಾರ್, ಮೈಥಾನ್, ರಾವತ್‌ಪಾದ, ದರೇಸಿ, ಛಟ್ಟಾ, ಮೋತಿಗಂಜ್, ಆಸ್ಪತ್ರೆ ರಸ್ತೆ, ಮೋತಿ ಕತ್ರಾ, ನೂರಿ ಗೇಟ್, ಕಿನಾರಿ ಬಜಾರ್, ಘಾಟಿಯಾ ಅಜಮ್ ಖಾನ್, ಯಮುನಾ ಕಿನಾರಾ ರಸ್ತೆ, ಜೀವನಿ ಮಂಡಿ, ಲಾಂಗ್ಡೆ ಕಿ ಚೌಕಿ, ಎಸ್‌ಎನ್ ಮೆಡಿಕಲ್ ಕಾಲೇಜು, ರಾಜಾ ಕಿ ಮಂಡಿ, ಲೋಹಮಂಡಿ, ಶಹಗಂಜ್, ಮಂಟೋಲಾ, ಪವರ್ ಹೌಸ್ ಪ್ರದೇಶದ ಜನರು ಕೋತಿಗಳ ಭೀತಿಯಿಂದ ತಮ್ಮ ಮನೆಗಳ ವರಾಂಡಾಗಳು, ಛಾವಣಿಗಳು ಮತ್ತು ಬಾಲ್ಕನಿಗಳನ್ನು ಕಬ್ಬಿಣದ ಬಲೆಗಳಿಂದ ಮುಚ್ಚಿದ್ದಾರೆ.