ಕರ್ನಾಟಕ

karnataka

ETV Bharat / bharat

2027ರ ಯುಪಿ ಚುನಾವಣೆ: ಯಾದವೇತರ ಒಬಿಸಿ ಮತಗಳ ಕ್ರೋಢೀಕರಣಕ್ಕೆ ಅಖಿಲೇಶ್ ಕಾರ್ಯತಂತ್ರ - Akhilesh Yadav Poll Strategy - AKHILESH YADAV POLL STRATEGY

2027ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಾಗಿ ಅಖಿಲೇಶ್ ಯಾದವ್ ಈಗಿನಿಂದಲೇ ಕಾರ್ಯತಂತ್ರ ಹೆಣೆಯಲು ಆರಂಭಿಸಿದ್ದಾರೆ.

ಎಸ್​ಪಿ ಮುಖಂಡ ಅಖಿಲೇಶ್ ಯಾದವ್
ಎಸ್​ಪಿ ಮುಖಂಡ ಅಖಿಲೇಶ್ ಯಾದವ್ (IANS)

By ETV Bharat Karnataka Team

Published : Jun 23, 2024, 4:24 PM IST

ಲಕ್ನೋ: 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ತಮ್ಮ ಕಾರ್ಯತಂತ್ರದ ಭಾಗವಾಗಿ ಸಮಾಜವಾದಿ ಪಕ್ಷದ (ಎಸ್​ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಯಾದವೇತರ ಒಬಿಸಿ ಸಮುದಾಯಗಳ ಮತಗಳನ್ನು ಕ್ರೋಢೀಕರಿಸಲು ಮುಂದಾಗಿದ್ದಾರೆ.

ಇತ್ತೀಚೆಗೆ ಕೊನೆಗೊಂಡ ಲೋಕಸಭಾ ಚುನಾವಣೆಗಳಲ್ಲಿ ಎಸ್​ಪಿ ಯಾದವ್ ಸಮುದಾಯದ ಕೇವಲ ಐದು ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು. ಕನೌಜ್​ನಿಂದ ಅಖಿಲೇಶ್, ಮೈನ್ ಪುರಿಯಿಂದ ಡಿಂಪಲ್ ಯಾದವ್, ಅಜಂಗಢದಿಂದ ಧರ್ಮೇಂದ್ರ ಯಾದವ್, ಫಿರೋಜಾಬಾದ್​ನಿಂದ ಅಕ್ಷಯ್ ಯಾದವ್ ಮತ್ತು ಬುದೌನ್​ನಿಂದ ಆದಿತ್ಯ ಯಾದವ್ ಹೀಗೆ ತನ್ನ ಕುಟುಂಬದ ಐವರು ಸದಸ್ಯರನ್ನು ಸಮಾಜವಾದಿ ಪಕ್ಷ ಕಣಕ್ಕಿಳಿಸಿತ್ತು. ಈ ಎಲ್ಲಾ ಐದು ಅಭ್ಯರ್ಥಿಗಳು ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ.

"ಸಮಾಜವಾದಿ ಪಕ್ಷವು ಯಾದವರ ಪರವಾದ ಪಕ್ಷ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳಲು ಬಯಸಿದ್ದರಿಂದ ಅಖಿಲೇಶ್ ತಮ್ಮ ಕುಟುಂಬದವರನ್ನು ಹೊರತುಪಡಿಸಿ ಬೇರೆ ಯಾವುದೇ ಯಾದವ್ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ. ಇದಕ್ಕೆ ಬದಲಾಗಿ ಅವರು ಇತರ ಒಬಿಸಿಗಳಿಗೆ ಹೆಚ್ಚಿನ ಟಿಕೆಟ್ ನೀಡಿದರು ಮತ್ತು ಇದರಿಂದ ಪಕ್ಷವು 37 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹಳ ದೊಡ್ಡ ಸಾಧನೆ ಮಾಡಲು ಸಾಧ್ಯವಾಯಿತು. ಅಖಿಲೇಶ್ ಇದೇ ತಂತ್ರವನ್ನು ವಿಧಾನಸಭಾ ಚುನಾವಣೆಯಲ್ಲಿಯೂ ಮುಂದುವರಿಸಲಿದ್ದಾರೆ" ಎಂದು ಪಕ್ಷದ ಹಿರಿಯ ವಕ್ತಾರರು ತಿಳಿಸಿದ್ದಾರೆ.

ಈ ತಂತ್ರಗಾರಿಕೆಯ ಕಾರಣದಿಂದಲೇ ಅಖಿಲೇಶ್ ಯಾದವ್ ಅವರು ತಮ್ಮ ಚಿಕ್ಕಪ್ಪ ಶಿವಪಾಲ್ ಯಾದವ್ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಹೆಸರಿಸಲು ಮುಂದಾಗುತ್ತಿಲ್ಲ. ಶಿವಪಾಲ್ ಅತ್ಯಂತ ಹಿರಿಯ ಶಾಸಕರಲ್ಲಿ ಒಬ್ಬರಾಗಿದ್ದು, ಪಕ್ಷದ ಎಲ್ಲಾ ಹಂತಗಳಲ್ಲಿ ಸ್ವೀಕಾರಾರ್ಹತೆಯನ್ನು ಹೊಂದಿದ್ದಾರೆ.

ಇನ್ನು ಮೊಹಮ್ಮದ್ ಅಜಂ ಖಾನ್ ಇನ್ನೂ ಜೈಲಿನಲ್ಲಿರುವುದರಿಂದ ಅಖಿಲೇಶ್ ಬದಲಿಗೆ ವಿರೋಧ ಪಕ್ಷದ ನಾಯಕನಾಗಬಲ್ಲ ಮುಸ್ಲಿಂ ಮುಖವನ್ನು ಎಸ್​ಪಿ ಹೊಂದಿಲ್ಲ. ಪಕ್ಷವು 32 ಮುಸ್ಲಿಂ ಶಾಸಕರನ್ನು ಹೊಂದಿದ್ದರೂ, ಅವರಲ್ಲಿ ಹೆಚ್ಚಿನವರಿಗೆ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಲು ಅಗತ್ಯವಾದ ಅನುಭವವಿಲ್ಲ.

ವಿಧಾನಸಭಾ ಚುನಾವಣೆಗಾಗಿ ಅಭ್ಯರ್ಥಿಗಳ ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಅಖಿಲೇಶ್ ಯಾದವ್ ಈಗಾಗಲೇ ಪ್ರಾರಂಭಿಸಿದ್ದಾರೆ ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ಚುನಾವಣೆಯಲ್ಲಿ ದಲಿತರ ಬೆಂಬಲದಿಂದ ಪಕ್ಷಕ್ಕೆ ಲಾಭವಾಗಿರುವುದರಿಂದ ದಲಿತರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪಕ್ಷದ ಅತಿದೊಡ್ಡ ರಾಜಕೀಯ ಆಟವು ಅಯೋಧ್ಯೆಯಲ್ಲಿ (ಫೈಜಾಬಾದ್) ಫಲ ನೀಡಿತು. ಇಲ್ಲಿ ಅದು ದಲಿತ ನಾಯಕ ಅವಧೇಶ್ ಪ್ರಸಾದ್ ಅವರನ್ನು ಕಣಕ್ಕಿಳಿಸಿ, ಬಿಜೆಪಿಯನ್ನು ಮಣ್ಣು ಮುಕ್ಕಿಸಿತು.

ಎಸ್​ಪಿಯ ಟಿಕೆಟ್ ಹಂಚಿಕೆ ಕಾರ್ಯತಂತ್ರವು ಐಎನ್​ಡಿಐಎ ಬ್ಲಾಕ್​ನ ಹೆಚ್ಚಿನ ಸ್ಥಾನ ಗಳಿಕೆಗೆ ಕಾರಣವಾಯಿತು ಎಂದು ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಯಾದವರಲ್ಲದ ಒಬಿಸಿಗಳು ಮತ್ತು ದಲಿತ ಮತದಾರರನ್ನು ಗಮನಾರ್ಹ ಪ್ರಮಾಣದಲ್ಲಿ ಹೊಂದಿರುವ ಪೂರ್ವಾಂಚಲದಲ್ಲಿ ಪಕ್ಷವು ಬಹುತೇಕ ಕ್ಲೀನ್ ಸ್ವೀಪ್ ಮಾಡಿದೆ. ಅಲ್ಲದೆ ಎಸ್​ಪಿ ಏಳು ಮೀಸಲು ಸ್ಥಾನಗಳನ್ನು ಕೂಡ ಗೆದ್ದಿದೆ. ದಲಿತರು ಈಗ ಬಿಎಸ್​ಪಿಯನ್ನು ಕಡೆಗಣಿಸುವುದರೊಂದಿಗೆ ಸಮುದಾಯದ ದೊಡ್ಡ ಭಾಗವು ಐಎನ್​ಡಿಐಎ ಬಣದ ಹಿಂದೆ ನಿಂತಿದೆ. ಬಿಎಸ್​ಪಿಗೆ ಮತ ನೀಡಿ ಮತವನ್ನೇಕೆ ವ್ಯರ್ಥ ಮಾಡಬೇಕು ಎಂಬುದು ಬಹುತೇಕ ದಲಿತರ ಅಭಿಪ್ರಾಯವಾಗಿದೆ.

ಇದನ್ನೂ ಓದಿ : ಬಿಎಸ್​ಪಿ ಸಂಯೋಜಕರಾಗಿ ಮಾಯಾವತಿ ಸೋದರಳಿಯ ಆಕಾಶ್ ಆನಂದ್ ಮರು ನೇಮಕ - Mayawati reinstates nephew

ABOUT THE AUTHOR

...view details