ತ್ರಿಶೂರ್(ಕೇರಳ):ಮಾಜಿ ಪ್ರಧಾನಿ, ದಿವಂಗತ ಇಂದಿರಾ ಗಾಂಧಿ 'ಭಾರತದ ಮಾತೆ' (Mother Of India) ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ಬಣ್ಣಿಸಿದ್ದಾರೆ. ಇದೇ ಸಂದರ್ಭದಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ಸಿಗ ಕೆ.ಕರುಣಾಕರನ್ 'ಧೈರ್ಯವಂತ ಆಡಳಿತಗಾರ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕರುಣಾಕರನ್ ಮತ್ತು ಮಾರ್ಕ್ಸ್‌ವಾದಿ ಹಿರಿಯ ನಾಯಕರಾದ ದಿ.ಇ.ಕೆ.ನಾಯನರ್ ಇವರಿಬ್ಬರೂ ನನ್ನ ರಾಜಕೀಯ ಗುರುಗಳು ಎಂದು ಅವರು ಹೇಳಿದರು.
ನಾನು ನನ್ನ ರಾಜಕೀಯ ಗುರುಗಳಿಗೆ ಗೌರವ ಸಲ್ಲಿಸಲು ಬಂದಿದ್ದೇನೆ. ಸ್ಮಾರಕಕ್ಕೆ ಭೇಟಿ ನೀಡಿರುವ ವಿಚಾರಕ್ಕೆ ಯಾವುದೇ ರಾಜಕೀಯ ಅರ್ಥ ಕಲ್ಪಿಸಬೇಡಿ ಎಂದು ಮಾಧ್ಯಮದವರಲ್ಲಿ ಸಚಿವರು ಮನವಿ ಮಾಡಿದರು. ಇದೇ ವೇಳೆ, ಕರುಣಾಕರನ್ ಅವರನ್ನು ಕೇರಳ 'ಕಾಂಗ್ರೆಸ್‌ನ ಪಿತ' ಎಂದು ಬಣ್ಣಿಸುವುದರಿಂದ ರಾಜ್ಯದ ಕಾಂಗ್ರೆಸ್‌ನ ಹಿರಿಯ ನಾಯಕರಿಗೆ ಯಾವುದೇ ಅಗೌರವ ಸೂಚಿಸಿದಂತಲ್ಲ ಎಂದು ಸುರೇಶ್ ಗೋಪಿ ವಿವರಿಸಿದರು. ಕರುಣಾಕರನ್ ಮತ್ತು ಅವರ ಪತ್ನಿ ಶಾರದಾ ಟೀಚರ್ ಅವರಂತೆಯೇ ನನಗೆ ಕರುಣಾಕರನ್ ಮತ್ತು ಅವರ ಪತ್ನಿ ಕಲ್ಯಾಣಿಕುಟ್ಟಿ ಅಮ್ಮ ಅವರೊಂದಿಗೆ ಉತ್ತಮ ಬಾಂಧವ್ಯವಿದೆ ಎಂದರು.
ಸುರೇಶ್ ಗೋಪಿ ಜೂನ್ 12ರಂದು ನಾಯನರ್ ಅವರ ಕಣ್ಣೂರಿನ ನಿವಾಸಕ್ಕೆ ಭೇಟಿ, ಕುಟುಂಬಸ್ಥರೊಂದಿಗೆ ಕುಶಲೋಪರಿ ವಿಚಾರಿಸಿದ್ದು ಗಮನಾರ್ಹ.
ಕುತೂಹಲದ ವಿಚಾರವೆಂದರೆ, ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಸುರೇಶ್ ಗೋಪಿ ತ್ರಿಶೂರ್‌ನಲ್ಲಿ ಕರುಣಾಕರನ್ ಅವರ ಪುತ್ರ, ಕಾಂಗ್ರೆಸ್ ನಾಯಕ ಕೆ.ಮುರಳೀಧರನ್ ಅವರನ್ನು ಸೋಲಿಸಿದ್ದರು. ಸಿಪಿಐ, ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ತ್ರಿಕೋನ ಸ್ಪರ್ಧೆಯಲ್ಲಿ ಕೆ.ಮುರಳೀಧರನ್ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟರು.