ನವದೆಹಲಿ:ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಮಹತ್ತರ ಹೆಗ್ಗುರುತು ಎಂದೇ ಬಿಂಬಿತವಾಗಿರುವ 'ಒಂದು ದೇಶ, ಒಂದು ಚುನಾವಣೆ' ವಿಧೇಯಕವು ಡಿಸೆಂಬರ್ 16 ರಂದು ಲೋಕಸಭೆಯಲ್ಲಿ ಮಂಡನೆಯಾಗಲಿದೆ. ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಇದನ್ನು ಮಂಡಿಸಲಿದ್ದಾರೆ ಎಂದು ತಿಳಿದುಬಂದಿದೆ.
ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಉದ್ದೇಶ ಹೊಂದಿರುವ ಸಂವಿಧಾನದ 129ನೇ ತಿದ್ದುಪಡಿ ವಿಧೇಯಕಕ್ಕೆ ಡಿಸೆಂಬರ್ 12ರಂದು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಜೊತೆಗೆ, ಮೂರು ಕೇಂದ್ರಾಡಳಿತ ಪ್ರದೇಶಗಳಿಗೆ ವಿಧಾನಸಭೆ ಸ್ಥಾನಮಾನ ನೀಡುವ ಮಸೂದೆಗೂ ಅಂಗೀಕಾರ ಸಿಕ್ಕಿದೆ.
ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಪದ್ಧತಿಯನ್ನು ಜಾರಿಗೆ ತರಬೇಕು ಎಂಬುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಇದರ ಜೊತೆಗೆ ನಡೆಯಬೇಕಾದ ಸ್ಥಳೀಯ ಸಂಸ್ಥೆಗಳ ಚುನಾವಣೆಯಿಂದ ಸದ್ಯಕ್ಕೆ ದೂರ ಉಳಿಯಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ.
ವಿಪಕ್ಷಗಳಿಂದ ತೀವ್ರ ವಿರೋಧ:ಸಂಸತ್ತಿನ ಇದೇ ಅಧಿವೇಶನದಲ್ಲಿ ಮಹತ್ವದ ಒಂದು ದೇಶ, ಒಂದು ಚುನಾವಣೆ ವಿಧೇಯಕವನ್ನು ಮಂಡಿಸಲು ತುದಿಗಾಲ ಮೇಲೆ ನಿಂತಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಈ ವಿಧೇಯಕವು ದೇಶದ ಚುನಾವಣಾ ಪದ್ಧತಿಗೆ ಮಾರಕ ಎಂದು ಟೀಕಿಸಿವೆ. ಪ್ರಸ್ತಾವಿತ ವಿಧೇಯಕವು, ದೇಶದ ಒಕ್ಕೂಟ ವ್ಯವಸ್ಥೆಗೆ ಕೊಡಲಿ ಪೆಟ್ಟು ನೀಡಲಿದೆ. ಈಗಿರುವ ಚುನಾವಣಾ ಪದ್ಧತಿಯನ್ನೇ ಅನುಸರಿಸಬೇಕು ಎಂದು ವಿಪಕ್ಷಗಳು ಆಗ್ರಹಿಸುತ್ತಿವೆ.