ಬೆಂಗಳೂರು: ವಿಚಾರಣೆಗಾಗಿ ಕರೆತಂದ ಗರ್ಭಿಣಿಯನ್ನು ಅವಧಿ ಮೀರಿ ಶೇಷಾದ್ರಿಪುರಂ ಠಾಣೆಯಲ್ಲಿ ಇರಿಸಿಕೊಂಡ ಆರೋಪ ಪ್ರಕರಣದ ಕುರಿತು ಇಲಾಖಾ ತನಿಖೆ ಕೈಗೊಂಡು ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ವಿಕಾಶ್ ತಿಳಿಸಿದ್ದಾರೆ.
ಶೇಷಾದ್ರಿಪುರಂ ಠಾಣೆ ಪೊಲೀಸರ ವಿರುದ್ಧ ಕೇಳಿಬಂದಿರುವ ಆರೋಪದ ಕುರಿತು ಕೇಂದ್ರ ವಿಭಾಗದ ಡಿಸಿಪಿ ಹಾಗೂ ಶೇಷಾದ್ರಿಪುರಂ ಉಪವಿಭಾಗದ ಎಸಿಪಿಯವರಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಗುರುವಾರ ಕೆ.ಸಿ.ಜನರಲ್ ಆಸ್ಪತ್ರೆಗೆ ಇಂಜೆಕ್ಷನ್ ಪಡೆದುಕೊಳ್ಳಲು ಪತಿಯೊಂದಿಗೆ ಮಹಿಳೆಯೊಬ್ಬರು ಬಂದಿದ್ದರು. ಆಧಾರ್ ಕಾರ್ಡ್ ಪರಿಶೀಲನೆ ವೇಳೆ ಆಕೆಗೆ ಪ್ರಸ್ತುತ 18 ವರ್ಷ 1 ತಿಂಗಳು ಮತ್ತು 20 ದಿನ ಎಂಬುದು ವೈದ್ಯಕೀಯ ಸಿಬ್ಬಂದಿಯ ಗಮನಕ್ಕೆ ಬಂದಿತ್ತು. ಆದರೆ ಈಗಾಗಲೇ ಆಕೆ 4 ತಿಂಗಳ ಗರ್ಭಿಣಿಯಾಗಿರುವುದರ ಕುರಿತು ಆಸ್ಪತ್ರೆ ಸಿಬ್ಬಂದಿ ಕೂಡಲೇ ಶೇಷಾದ್ರಿಪುರಂ ಠಾಣೆಗೆ ಮಾಹಿತಿ ನೀಡಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಹಿಳೆ ಮತ್ತು ಆಕೆಯ ಪತಿಯನ್ನು ಠಾಣೆಗೆ ಕರೆತಂದ ಪೊಲೀಸರು, ರಾತ್ರಿ 10 ಗಂಟೆವರೆಗೆ ಠಾಣೆಯಲ್ಲಿಯೇ ಇರಿಸಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ವಿಕಾಶ್, ''18 ವರ್ಷ ತುಂಬುವ ಮುನ್ನವೇ ಗರ್ಭಿಣಿಯಾಗಿರುವುದರ ಕುರಿತು ಕೆ.ಸಿ.ಜನರಲ್ ಆಸ್ಪತ್ರೆಯಿಂದ ಎಂಎಲ್‌ಸಿ ರಿಪೋರ್ಟ್ ಬಂದಿತ್ತು. ಈ ಕುರಿತು ವಿಚಾರಣೆಗಾಗಿ ಠಾಣೆಗೆ ಕರೆಯಲಾಗಿತ್ತು. ಇಬ್ಬರೂ ಸಹ ಮದುವೆಯಾಗಿ ಒಟ್ಟಿಗೆ ವಾಸವಿದ್ದಾರೆ. ಈ ಕುರಿತು ಯಾರೂ ಸಹ ದೂರು ನೀಡಿಲ್ಲ. ಶೇಷಾದ್ರಿಪುರಂ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ" ಎಂದರು.
''ಅಲ್ಲದೆ, ಗರ್ಭಿಣಿಯನ್ನ ಅವಧಿ ಮೀರಿ ಪೊಲೀಸ್ ಠಾಣೆಯಲ್ಲಿ ಇರಿಸಿಕೊಂಡ ಬಗ್ಗೆ ಆಂತರಿಕ ತನಿಖೆ ಕೈಗೊಂಡು, ವರದಿ ನೀಡುವಂತೆ ಡಿಸಿಪಿ ಹಾಗೂ ಎಸಿಪಿಯವರಿಗೆ ಸೂಚಿಸಲಾಗಿದೆ" ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಸ್ಟೆರಿಲಿಟಿ ಟೆಸ್ಟ್ನಲ್ಲಿ ಫೇಲ್: 9 ಔಷಧಗಳ ನಿರ್ಬಂಧಿಸುವಂತೆ ಕೇಂದ್ರಕ್ಕೆ ಸಚಿವ ಗುಂಡೂರಾವ್ ಪತ್ರ