ಜಮ್ಮು (ಜಮ್ಮು ಮತ್ತು ಕಾಶ್ಮೀರ):ವಿಧಾನಸಭೆ ಚುನಾವಣೆ ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರುಸ್ಥಾಪಿಸಲಾಗುವುದು. ರದ್ದು ಮಾಡಲಾಗಿರುವ 370ನೇ ವಿಧಿ ಮರಳಿ ತರುವ ಮಾತೇ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪುನರುಚ್ಚರಿಸಿದ್ದಾರೆ.
ಜಮ್ಮುವಿನಲ್ಲಿ ಇಂದು (ಶನಿವಾರ) ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, 370 ನೇ ವಿಧಿ ಮೊದಲ ಬಾರಿಗೆ ರಾಷ್ಟ್ರಧ್ವಜ ಮತ್ತು ಸಂವಿಧಾನದ ಅಡಿ ಚುನಾವಣೆ ನಡೆಯುತ್ತಿದೆ. ಕಣಿವೆಯಲ್ಲಿ ಭಯೋತ್ಪಾದನೆ ಕಿತ್ತೊಗೆಯಲಾಗುತ್ತಿದೆ. ಉಗ್ರವಾದ ಜೀವಂತವಾಗಿರಲು ಕಾಂಗ್ರೆಸ್ - ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಹಿಂದೆ ಎರಡು ಧ್ವಜಗಳ (ರಾಜ್ಯ ಧ್ವಜ ಮತ್ತು ರಾಷ್ಟ್ರಧ್ವಜ) ಅಡಿಯಲ್ಲಿ ಚುನಾವಣೆಗಳು ನಡೆಯುತ್ತಿದ್ದವು. 370ನೇ ವಿಧಿಯನ್ನು ರದ್ದು ಮಾಡಿ ಅಖಂಡ ಭಾರತಕ್ಕೆ ಕಾಶ್ಮೀರವನ್ನು ಸೇರಿಸಿದ ಬಳಿಕ ಏಕರಾಷ್ಟ್ರ, ಏಕ ಪ್ರಧಾನಿ ತತ್ವದಲ್ಲಿ ಕೇಂದ್ರಾಡಳಿತ ಪ್ರದೇಶ ಆಡಳಿತ ನಡೆಯುತ್ತಿದೆ. ಮುಂಬರುವ ಎಲ್ಲ ಚುನಾವಣೆಗಳು ಐತಿಹಾಸಿಕವಾಗಿವೆ ಎಂದು ಹೇಳಿದರು.
ಚುನಾವಣೆ ಬಳಿಕ ರಾಜ್ಯ ಸ್ಥಾನಮಾನ:ವಿಧಾನಸಭೆ ಚುನಾವಣೆ ಮುಗಿದ ಬಳಿಕ ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯ ಸ್ಥಾನಮಾನವನ್ನು ಪುನರ್ ಸ್ಥಾಪಿಸಲಾಗುವುದು. ಕಾಂಗ್ರೆಸ್ ರಾಜ್ಯ ರಚನೆಯ ಭರವಸೆಗಳ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದೆ. ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ರಾಜ್ಯ ಸ್ಥಾನಮಾನ ನೀಡುವ ಶಕ್ತಿ ಇದೆಯೇ? ಚುನಾವಣೆಗೂ ಮೊದಲು ವಿಪಕ್ಷಗಳು ರಾಜ್ಯ ಸ್ವಾಯತ್ತತೆ ಬಗ್ಗೆ ಮಾತನಾಡುವುದಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್-ಎನ್‌ಸಿ ಮೈತ್ರಿ ವಿರುದ್ಧ ಕಿಡಿ:ನ್ಯಾಷನಲ್ ಕಾನ್ಫರೆನ್ಸ್ - ಕಾಂಗ್ರೆಸ್ ಮೈತ್ರಿಕೂಟದ ಬಗ್ಗೆ ಟೀಕಿಸಿದರ ಅಮಿತ್ ಶಾ, ಎನ್‌ಡಿಎ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿ ಶೇಕಡಾ 70 ರಷ್ಟು ಉಗ್ರ ಚಟುವಟಿಕೆಗಳನ್ನು ಕಡಿಮೆ ಮಾಡಿದೆ. ಆದರೆ, ಎನ್‌ಸಿ - ಕಾಂಗ್ರೆಸ್ ಮೈತ್ರಿಯು ಮತ್ತೆ ಭಯೋತ್ಪಾದನೆಯ ಕೆಸರಿಗೆ ತಳ್ಳಲು ಪ್ರಯತ್ನಿಸುತ್ತಿದೆ. ಈ ಮೈತ್ರಿಕೂಟ ಎಂದಿಗೂ ಸರ್ಕಾರ ರಚಿಸಲು ಸಾಧ್ಯವಿಲ್ಲ. ಈ ಮೈತ್ರಿ ಅಧಿಕಾರಕ್ಕೆ ಬಂದರೆ ಜನರಿಗೆ ತೊಂದರೆ ಎಂದರು.
ಪಿಡಿಪಿಯೊಂದಿಗೆ ಎನ್‌ಸಿ ಮತ್ತು ಕಾಂಗ್ರೆಸ್ ಮೈತ್ರಿ ಜಮ್ಮ ಕಾಶ್ಮೀರವನ್ನು ಭಯೋತ್ಪಾದನೆಯ ಜ್ವಾಲೆಗೆ ತಳ್ಳಲು ಪ್ರಯತ್ನಿಸುತ್ತಿವೆ. ಆ ಮೂರು ಕುಟುಂಬಗಳು ಜಮ್ಮು- ಕಾಶ್ಮೀರವನ್ನು ಲೂಟಿ ಮಾಡಿವೆ. ಜನರ ಕಿತ್ತುಕೊಳ್ಳುವುದೇ ಇವರ ಉದ್ದೇಶ. ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮತ್ತೆ ಭಯೋತ್ಪಾದನೆ ಸ್ಫೋಟಗೊಳ್ಳುತ್ತದೆ. ಬಿಜೆಪಿಯಿಂದ ಮಾತ್ರ ಉಗ್ರವಾದದ ಹುಟ್ಟು ಅಡಗಿಸಲು ಸಾಧ್ಯ ಎಂದು ಹೇಳಿದರು.
ಇದನ್ನೂ ಓದಿ:ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ಬಳಿಕ ಪ್ರಜಾಪ್ರಭುತ್ವದ ಹೊಸ ಶಕೆ ಆರಂಭ: ಬಿಜೆಪಿ - JK assembly polls