ನವದೆಹಲಿ:ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದಲ್ಲಿ ಹೊಸ ಪಿಂಚಣಿ ಯೋಜನೆಯನ್ನು ಘೋಷಿಸಿದ್ದಾರೆ. ಅಪ್ರಾಪ್ತ ಮಕ್ಕಳ ಹೆಸರಿನಲ್ಲೂ ಖಾತೆ ತೆರೆದು ಹಣದ ಉಳಿತಾಯ ಮಾಡಲು ಈ ಯೋಜನೆ ಅವಕಾಶ ನೀಡಲಿದೆ. ಅಂದರೆ, ಪೋಷಕರು ಮಕ್ಕಳ ಹೆಸರಿನಲ್ಲಿ ಈ ಯೋಜನೆಯನ್ನು ಆರಂಭಿಸಿ, ಹೂಡಿಕೆ ಮಾಡಬಹುದು.
ಈ ಯೋಜನೆಗೆ 'ಎನ್‌ಪಿಎಸ್ ವಾತ್ಸಲ್ಯ' ಎಂದು ಹೆಸರಿಸಲಾಗಿದೆ. ಹೆಸರೇ ಸೂಚಿಸುವಂತೆ ಮಕ್ಕಳ ಮೇಲಿನ ಪ್ರೀತಿ, ವಾತ್ಸಲ್ಯದಿಂದ ಅವರ ಭವಿಷ್ಯದ ದೃಷ್ಟಿಯಿಂದ ಅಪ್ರಾಪ್ತ ವಯಸ್ಸಿನಲ್ಲೇ ಅವರಿಗಾಗಿ ಹಣದ ಉಳಿತಾಯ ಮಾಡುವುದಾಗಿದೆ. ಮಕ್ಕಳು ಪ್ರಾಪ್ತರಾದ ಬಳಿಕ ಈ ಯೋಜನೆಯನ್ನು ರಾಷ್ಟ್ರೀಯ ಪಿಂಚಣಿ ಯೋಜನೆಯನ್ನಾಗಿ(ಎನ್‌ಪಿಎಸ್) ಮಾರ್ಪಾಡು ಮಾಡಲು ಅವಕಾಶ ನೀಡಲಾಗುತ್ತದೆ.
ಎನ್ಪಿಎಸ್ಗೆ ಅರ್ಹತೆ:ಎನ್‌ಪಿಎಸ್ ಯೋಜನೆ ಆರಂಭಿಸಲು ಫಲಾನುಭವಿಗಳು ಭಾರತದ ನಿವಾಸಿಯಾಗಿರಬೇಕು. ಅನಿವಾಸಿ ಅಥವಾ ವಿದೇಶಿ ಪ್ರಜೆಯಾಗಿದ್ದರೆ ಷರತ್ತುಗಳಿಗೆ ಬದ್ಧರಾಗಿರಬೇಕು. ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ದಿನಾಂಕದಂದು ನಿಮ್ಮ ವಯಸ್ಸು 18 ರಿಂದ 70 ವರ್ಷಗಳ ನಡುವೆ ಇರಬೇಕು. ಚಂದಾದಾರರ ನೋಂದಣಿ ಫಾರ್ಮ್ (SRF) ಪ್ರಕಾರ, ಕೆವೈಸಿ ಮಾನದಂಡಗಳನ್ನು ಅನುಸರಿಸಬೇಕು. ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು.
ಕೇಂದ್ರ ಸರ್ಕಾರವು ಸಶಸ್ತ್ರ ಪಡೆಗಳನ್ನು ಹೊರತುಪಡಿಸಿ ಎಲ್ಲಾ ಕೇಂದ್ರ ಸರ್ಕಾರಿ ನೌಕರರಿಗೆ ಎನ್‌ಪಿಎಸ್ ಖಾತೆ ಆರಂಭಕ್ಕೆ ಅವಕಾಶ ನೀಡಿದೆ. ಜನವರಿ 1, 2004 ರಂದು ಅಥವಾ ನಂತರ ನೇಮಕವಾದ ಎಲ್ಲಾ ಕೇಂದ್ರ ಸರ್ಕಾರಿ ನೌಕರರು ಎನ್‌ಪಿಎಸ್ ಯೋಜನೆಯಡಿ ಬರಬಹುದು.