ಡೆಹ್ರಾಡೂನ್ (ಉತ್ತರಾಖಂಡ) :ಸರ್ವ ಧರ್ಮಗಳಿಗೆ ಅನ್ವಯವಾಗುವ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಯನ್ನು ವಿಧಾನಸಭೆಯಲ್ಲಿ ಮಂಡಿಸಿರುವ ಉತ್ತರಾಖಂಡ ಸರ್ಕಾರ ಬುಧವಾರ ಅದನ್ನು ಸದನದಲ್ಲಿ ಅಂಗೀಕಾರ ಪಡೆದುಕೊಳ್ಳುವ ಸಾಧ್ಯತೆ ಇದೆ. ಬಳಿಕ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಸಿಎಂ ಧಾಮಿ ಅವರು ಮಂಗಳವಾರವಾದ ನಿನ್ನೆ ಮಹತ್ವದ ಯುಸಿಸಿ ಮಸೂದೆಯನ್ನು ಮಂಡಿಸಿದರು. ಸಂಜೆ 6 ಗಂಟೆಯವರೆಗೆ ಮಸೂದೆಯ ಮೇಲೆ ಚರ್ಚೆ ನಡೆಸಲಾಯಿತು. ಈ ವೇಳೆ ಕಲಾಪದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು. ಸರ್ಕಾರವು ತರಾತುರಿಯಲ್ಲಿ ಯುಸಿಸಿ ಜಾರಿಗೆ ತರಲು ನಿರ್ಧರಿಸಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದವು. ಯುಸಿಸಿ ಕರಡನ್ನು ಪೂರ್ಣ ಅಧ್ಯಯನ ಮಾಡಲು ಸಮಯ ನೀಡಿಲ್ಲ ಎಂದು ದೂರಿದವು.
ಬಿಜೆಪಿಗೆ ಪೂರ್ಣ ಬಹುಮತ:ಉತ್ತರಾಖಂಡ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಇಂದು ಯುಸಿಸಿ ಬಗ್ಗೆ ಚರ್ಚೆ ನಡೆದ ಬಳಿಕ ಮಸೂದೆಗೆ ಇಂದೇ ಅಂಗೀಕಾರ ಸಿಗಲಿದೆ ಎಂದು ಸರ್ಕಾರ ಆಶಿಸಿದೆ. ವಿಧಾನಸಭೆಯಲ್ಲಿ ಬಿಜೆಪಿ ಸರ್ಕಾರಕ್ಕೆ ಸಂಪೂರ್ಣ ಬಹುಮತ ಇರುವುದರಿಂದ ಮಸೂದೆ ಪೂರ್ಣ ಬಹುಮತದಿಂದ ಪಾಸಾಗುವ ಎಲ್ಲ ಸಾಧ್ಯತೆ ಇದೆ. ಸದನದಲ್ಲಿ ಬಿಜೆಪಿ 47 ಶಾಸಕರನ್ನು ಹೊಂದಿದ್ದರೆ, ವಿರೋಧ ಪಕ್ಷವಾದ ಕಾಂಗ್ರೆಸ್ 19 ಶಾಸಕರು, ಇತರ 4 ಶಾಸಕರು ಇದ್ದಾರೆ.