ಬಾರಾಮುಲ್ಲಾ, ಜಮ್ಮು ಕಾಶ್ಮೀರ: ಭಾರತೀಯ ಸೇನಾ ವಾಹನವನ್ನು ಗುರಿಯಾಗಿಸಿಕೊಂಡು ಶಂಕಾಸ್ಪದ ಭಯೋತ್ಪಾದಕರು ನಡೆಸಿರುವ ದಾಳಿಯಲ್ಲಿ ಇಬ್ಬರು ಯೋಧರು ಹಾಗೂ ಇಬ್ಬರು ಕೂಲಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮೂರು ಮಂದಿ ಸೈನಿಕರು ಗಾಯಗೊಂಡಿದ್ದಾರೆ. ಗಡಿ ನಿಯಂತ್ರಣ ರೇಖೆ ಸಮೀಪದಲ್ಲಿರುವ ಗುಲ್ಮಾರ್ಗ್ ಬಳಿಯ ಬುತಪಥೇರಿ ಪ್ರದೇಶದ ನಗಿನ್ನಲ್ಲಿ ಈ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಕೋರರ ಪತ್ತೆಗೆ ಭದ್ರತಾ ಪಡೆ ದೊಡ್ಡ ಪ್ರಮಾಣದ ಕಾರ್ಯಾಚರಣೆಗೆ ಮುಂದಾಗಿದೆ.
ಗುರುವಾರ ಸಂಜೆ 18ನೇ ರಾಷ್ಟ್ರೀಯ ರೈಫಲ್ ವಾಹನ ಬುತಪಥೇರಿಯಿಂದ ಸಾಗುವಾಗ ಈ ದಾಳಿ ನಡೆದಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಆರಂಭದಲ್ಲಿ ನಾಲ್ಕರಿಂದ ಐದು ಯೋಧರು ಮತ್ತು ಕೆಲವು ಕೆಲಸಗಾರರು ಗಾಯಗೊಂಡಿದ್ದಾರೆ ಎಂದು ವರದಿಯಾಗಿತ್ತು. ಇದೀಗ ಗಾಯದಿಂದಾಗಿ ಇಬ್ಬರು ಯೋಧರು ಮತ್ತು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು, ಇನ್ನು ಮೂರು ಮಂದಿ ಯೋಧರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಉತ್ತರ ಕಾಶ್ಮೀರದಲ್ಲಿನ ಸೇನಾಧಿಕಾರಿಗಳು ದೃಢಪಡಿಸಿದ್ದಾರೆ.
ಯೋಧರ ಜತೆಗೆ ಕಾರ್ಮಿಕರು ಸಾವು:ಸಾವನ್ನಪ್ಪಿದ್ದ ಕಾರ್ಮಿಕರನ್ನು ನೌಶೇರಾದ ಬೊನಿಯರ್ನ ಮುಶ್ತಕ್ ಅಹಮದ್ ಚೌಧರಿ ಮತ್ತು ಬರ್ನಟ್ ಬೊನಿಯರ್ನ ಜಾಹೋರ್ ಅಹಮದ್ ಮೀರ್ ಎಂದು ಗುರುತಿಸಲಾಗಿದೆ. ಹುತಾತ್ಮರಾದ ಯೋಧರು ಜೀವನ್ ಸಿಂಗ್ ಮತ್ತು ಖೈಸರ್ ಅಹಮದ್ ಶಾ ಎಂದು ತಿಳಿದು ಬಂದಿದೆ.
ದಾಳಿ ಪ್ರದೇಶದಲ್ಲಿ ಅಡಗಿ ಕುಳಿತಿದ್ದ ಭಯೋತ್ಪಾದಕರು ಸೇನಾ ವಾಹನ ಬರುತ್ತಿದ್ದಂತೆ ಗುಂಡಿನ ದಾಳಿಗೆ ಮುಂದಾಗಿದ್ದಾರೆ. ಈ ದಾಳಿಯು ಒಳನುಸುಳುವಿಕೆಯ ಭಾಗವಾಗಿದೆ ಎಂಬುದನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಶೋಧ ಕಾರ್ಯಾಚರಣೆಯ ಹಿರಿಯ ಭದ್ರತಾ ಅಧಿಕಾರಿ ತಿಳಿಸಿದ್ದಾರೆ.
ಭರದಿಂದ ಸಾಗಿದ ಶೋಧ ಕಾರ್ಯಾಚರಣೆ:ದಾಳಿಯ ಬೆನ್ನಲ್ಲೇ ಭದ್ರತಾ ಪಡೆ ಶೋಧ ಕಾರ್ಯಾಚರಣೆಗೆ ಮುಂದಾಗಿದೆ. ಹೆಚ್ಚುವರಿ ಸೇನೆಯನ್ನು ಈ ಪ್ರದೇಶದಲ್ಲಿ ನಿಯೋಜಿಸಲಾಗಿದೆ. ಡ್ರೋನ್ ಮತ್ತು ಹೆಲಿಕಾಪ್ಟರ್ ಗಳನ್ನು ಈ ಪ್ರದೇಶದಲ್ಲಿ ನಿಯೋಜಿಸಲಾಗಿದ್ದು, ಶೋಧಕ್ಕಾಗಿ ಚೆಕ್ಪೋಸ್ಟ್ಗಳಲ್ಲಿ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.
ಘಟನೆ ಕುರಿತು ಹೇಳಿಕೆ ಪ್ರಕಟಿಸಿರುವ ಬಾರಾಮುಲ್ಲಾ ಪೊಲೀಸರು, ಭಯೋತ್ಪಾದಕರು ಮತ್ತು ಸೇನೆ ನಡುವೆ ಗುಂಡಿನ ದಾಳಿ ಸಾಗಿದ್ದು, ಸತ್ಯಾಸತ್ಯೆತೆಗಳನ್ನು ಪರಿಶೀಲಿಸಿದ ನಂತರ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಾಗುವುದು ಎಂದಿದ್ದಾರೆ.
ಪುಲ್ವಾಮಾದ ಟ್ರಾಲ್ ಪ್ರದೇಶದಲ್ಲಿ ಉತ್ತರ ಪ್ರದೇಶದ ಕಾರ್ಮಿಕ ಗಾಯಗೊಂಡಿರುವ ಕೆಲವೇ ಗಂಟೆಗಳ ನಂತರ ಈ ದಾಳಿ ನಡೆದಿದೆ. ಈ ದಾಳಿಯ ಹಿಂದೆ ಉಗ್ರರ ಕೈವಾಡವಿಲ್ಲ ಎಂದು ತಿಳಿದು ಬಂದಿದೆ. ಇದಕ್ಕೆ ಮೂರು ದಿನ ಮುನ್ನ ಗಂದರ್‌ಬಾಲ್ ಜಿಲ್ಲೆಯ ಶ್ರೀನಾಗಾ-ಲೇಹ್ ರಾಷ್ಟ್ರೀಯ ಹೆದ್ದಾರಿಯ ಸುರಂಗ ನಿರ್ಮಾಣ ಸ್ಥಳದಲ್ಲಿ ಭಾನುವಾರ ಸಂಜೆ ಉಗ್ರರು ದಾಳಿ ನಡೆಸಿದ್ದು, ವೈದ್ಯರು ಸೇರಿದಂತೆ ಏಳು ಕಾರ್ಮಿಕರು ಸಾವನ್ನಪ್ಪಿದ್ದರು.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ: ಡಾಕ್ಟರ್ ಸೇರಿ 7 ಮಂದಿ ಸಾವು; ಹತ್ತಕ್ಕೂ ಹೆಚ್ಚು ಜನರಿಗೆ ಗಾಯ