ಚಂಡೀಗಢ:ಟರ್ಕಿ ಮೂಲದ ಕಳ್ಳಸಾಗಣೆದಾರ ನವಪ್ರೀತ್ ಸಿಂಗ್ ಅಲಿಯಾಸ್ ನವ್ ಭುಲ್ಲರ್ ನ ಇಬ್ಬರು ಸಹಚರರನ್ನು ಬಂಧಿಸಿರುವ ಪಂಜಾಬ್ ಪೊಲೀಸರು, ಅವರಿಂದ 105 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಇದು ಪಂಜಾಬಿನಲ್ಲಿ ಇತ್ತೀಚಿನ ದಿನಗಳಲ್ಲಿ ವಶಪಡಿಸಿಕೊಳ್ಳಲಾದ ಅತಿದೊಡ್ಡ ಪ್ರಮಾಣದ ಹೆರಾಯಿನ್ ಆಗಿದೆ.
ಬಂಧಿತರಿಂದ 31.93 ಕೆಜಿ ಕೆಫೀನ್ ಅನ್ ಹೈಡ್ರಸ್ ಮತ್ತು 17 ಕೆಜಿ ಡೆಕ್ಸ್ ಟ್ರೋಮೆಥೋರ್ಫಾನ್ (ಡಿಎಂಆರ್) ಸೇರಿದಂತೆ ಐದು ವಿದೇಶಿ ನಿರ್ಮಿತ ಪಿಸ್ತೂಲ್ಗಳು, ಒಂದು ದೇಶೀಯ ನಿರ್ಮಿತ ಪಿಸ್ತೂಲ್ ಮತ್ತು ಭಾರಿ ಪ್ರಮಾಣದ ನಿಷೇಧಿತ ಮಾದಕವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಗೌರವ್ ಯಾದವ್ ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಅಮೃತಸರದ ಬಾಬಾ ಬಕಾಲದ ಗುರು ತೇಜ್ ಬಹದ್ದೂರ್ ಕಾಲೋನಿ ನಿವಾಸಿ ನವಜೋತ್ ಸಿಂಗ್ ಮತ್ತು ಕಪೂರ್ ಥಲಾದ ಕಾಲಾ ಸಂಘಿಯಾನ್ ನಿವಾಸಿ ಲವ್ ಪ್ರೀತ್ ಕುಮಾರ್ ಎಂದು ಗುರುತಿಸಲಾಗಿದೆ.
"ಹೆರಾಯಿನ್ ಪ್ರಮಾಣವನ್ನು ನಾಲ್ಕು ಪಟ್ಟು ಹೆಚ್ಚಿಸಲು ಆರೋಪಿಗಳು ಈ ನಿಷೇಧಿತ ಡ್ರಗ್ಸ್ಗಳನ್ನು ಏಜೆಂಟ್ಗಳಾಗಿ ಬಳಸುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ" ಎಂದು ಡಿಜಿಪಿ ಹೇಳಿದರು.
ಕಾರ್ಯಾಚರಣೆಯ ವಿವರಗಳನ್ನು ಹಂಚಿಕೊಂಡ ಡಿಜಿಪಿ ಯಾದವ್, ವಿದೇಶಿ ಮೂಲದ ಕಳ್ಳಸಾಗಣೆದಾರ ನವಪ್ರೀತ್ ಸಿಂಗ್ ಬಾಬಾ ಬಕಲಾ (ಅಮೃತಸರ) ಕಾಲೋನಿ ಲೇಡಿ ರಸ್ತೆಯಲ್ಲಿರುವ ಬಾಡಿಗೆ ಮನೆಯಲ್ಲಿ ಬೀಡುಬಿಟ್ಟಿರುವ ತನ್ನ ಸಹಚರರನ್ನು ಬಳಸಿಕೊಂಡು ಪಾಕಿಸ್ತಾನ ಬೆಂಬಲಿತ ಗಡಿಯಾಚೆಗಿನ ಕಳ್ಳಸಾಗಣೆ ದಂಧೆಯನ್ನು ನಿರ್ವಹಿಸುತ್ತಿರುವ ಬಗ್ಗೆ ಅಮೃತಸರದ ಕೌಂಟರ್ ಇಂಟೆಲಿಜೆನ್ಸ್ (ಸಿಐ) ತಂಡಕ್ಕೆ ಗುಪ್ತಚರ ಮಾಹಿತಿ ಸಿಕ್ಕಿತ್ತು ಎಂದು ಹೇಳಿದರು.
ನಂತರ ತ್ವರಿತವಾಗಿ ಗುಪ್ತಚರ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಮತ್ತು ಬಾಬಾ ಬಕಾಲಾದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಬಲ್ಬೀರ್ ಸಿಂಗ್ ಅವರ ಮೇಲ್ವಿಚಾರಣೆಯಲ್ಲಿ ವಿಶೇಷ ಚೆಕ್ ಪಾಯಿಂಟ್ ಅನ್ನು ಸ್ಥಾಪಿಸಲಾಯಿತು. ಈ ಮೂಲಕ ಆರೋಪಿಗಳಾದ ನವಜೋತ್ ಸಿಂಗ್ ಮತ್ತು ಲವ್ ಪ್ರೀತ್ ಕುಮಾರ್ ಅವರನ್ನು ಬಂಧಿಸಲಾಯಿತು.
ಅವರು ಪ್ರಯಾಣಿಸುತ್ತಿದ್ದ ಫೋಕ್ಸ್ ವ್ಯಾಗನ್ ವರ್ಟಸ್ ಕಾರಿನಿಂದ 7 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಯಿತು ಎಂದು ಅವರು ಹೇಳಿದರು. ಬಂಧಿತ ಆರೋಪಿಗಳ ಹೇಳಿಕೆಗಳ ಆಧಾರದ ಮೇಲೆ, ಅವರು ವಾಸಿಸುತ್ತಿದ್ದ ಬಾಡಿಗೆ ಮನೆಯಿಂದ ಉಳಿದ 98 ಕೆಜಿ ಹೆರಾಯಿನ್ ಜೊತೆಗೆ ಶಸ್ತ್ರಾಸ್ತ್ರಗಳು, ಕೆಫೀನ್ ಅನ್ ಹೈಡ್ರಸ್ ಮತ್ತು ಡಿಎಂಆರ್ ಅನ್ನು ವಶಪಡಿಸಿಕೊಳ್ಳಲಾಯಿತು ಎಂದು ಡಿಜಿಪಿ ತಿಳಿಸಿದರು.
ಇದನ್ನೂ ಓದಿ : 26/11ರ ಮುಂಬೈ ದಾಳಿಗೆ ಅಂದಿನ ಸರ್ಕಾರ ತಕ್ಕ ಪ್ರತ್ಯುತ್ತರ ನೀಡಲಿಲ್ಲ: ಜೈಶಂಕರ್